ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ನೋಡುತ್ತಿದ್ದರೆ ಫ್ಯಾನ್ಸ್ ಟೀಂ ಇಂಡಿಯಾಕ್ಕೆ ತವರಿನಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಥಾ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ ಎನ್ನುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 489 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಇದೀಗ ಮೊದಲ ಇನಿಂಗ್ಸ್ ನಲ್ಲಿ ಈಗಾಗಲೇ 5 ವಿಕೆಟ್ ಕಳೆದುಕೊಂಡಿದ್ದು ಕೇವಲ 106 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 58 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಕೆಎಲ್ ರಾಹುಲ್ ಕೂಡಾ 22 ರನ್ ಗಳಿಸಿ ಔಟಾಗಿದ್ದಾರೆ. ಸಾಯಿ ಸುದರ್ಶನ್ 15 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಇವರನ್ನು ಹೊರತುಪಡಿಸಿದರೆ ಉಳಿದ ಮೂವರದ್ದು ಏಕಂಕಿ ಸಾಧನೆ.
ದಕ್ಷಿಣ ಆಫ್ರಿಕಾದ ಬಾಲಂಗೋಚಿಗಳೂ ರನ್ ಗಳಿಸಿದ್ದ ಪಿಚ್ ನಲ್ಲಿ ಭಾರತೀಯರು ತಮ್ಮದೇ ನೆಲದಲ್ಲಿ ಎ ದರ್ಜೆಯ ತಂಡಕ್ಕಿಂತಲೂ ಕಡೆಯವರಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೀಗ ಭಾರತ ಮೊದಲ ಇನಿಂಗ್ಸ್ ನಲ್ಲಿ 380 ರನ್ ಹಿನ್ನಡೆಯಲ್ಲಿದೆ. ಇದೇ ರೀತಿ ಬ್ಯಾಟಿಂಗ್ ನಡೆಸಿದರೆ ಫಾಲೋ ಆನ್ ಅವಮಾನಕ್ಕೆ ಒಳಗಾಗಬೇಕಾಗುತ್ತದೆ.
ತವರಿನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವವರೇ ಇರಲಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾದಂತಹ ತಂಡಗಳು ಸಕ್ಸಸ್ ಕಾಣುತ್ತಲೇ ಇರಲಿಲ್ಲ. ಇನ್ನು ಟೆಸ್ಟ್ ಮಾದರಿಯಲ್ಲಂತೂ ಭಾರತ ಬಲಿಷ್ಠವಾಗಿತ್ತು. ಆದರೆ ಈಗ ದೇಶೀಯ ಕ್ರಿಕೆಟ್ ತಂಡಕ್ಕಿಂತಲೂ ಹೀನಾಯ ಸ್ಥಿತಿ ತಲುಪಿದೆ. ಇದಕ್ಕೆ ಫ್ಯಾನ್ಸ್ ಹಿಡಿಶಾಪ ಹಾಕುತ್ತಿದ್ದಾರೆ.