ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ಬದಲಾದರೂ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ.
ಶುಭಮನ್ ಗಿಲ್ ಗಾಯಗೊಂಡ ಕಾರಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ರಿಷಭ್ ಪಂತ್ ನಾಯಕರಾಗಿದ್ದಾರೆ. ಈ ಮೂಲಕ ಎಂಎಸ್ ಧೋನಿ ಬಳಿಕ ಟೀಂ ಇಂಡಿಯಾವನ್ನು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸುತ್ತಿರುವ ಎರಡನೇ ವಿಕೆಟ್ ಕೀಪರ್ ಎನ್ನುವ ಖ್ಯಾತಿ ಅವರದ್ದಾಗಿದೆ.
ಅದೇನೇ ಇದ್ದರೂ ಟೀಂ ಇಂಡಿಯಾಕ್ಕೆ ಟಾಸ್ ಗೆಲ್ಲುವ ಅದೃಷ್ಟ ಮಾತ್ರ ಕೂಡಿಬಂದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಯಾವುದೇ ಮಾದರಿಯಲ್ಲೂ ಟಾಸ್ ಗೆಲ್ಲುವುದೇ ಕಷ್ಟವಾಗಿದೆ. ಟಾಸ್ ಸೋಲುವುದರಲ್ಲೇ ಟೀಂ ಇಂಡಿಯಾ ದಾಖಲೆ ಮಾಡಿದೆ. ಕಳೆದ ಪಂದ್ಯದಲ್ಲೂ ಶುಭಮನ್ ಗಿಲ್ ಟಾಸ್ ಸೋತಿದ್ದರು.
ಈ ಪಂದ್ಯದಲ್ಲಿ ರಿಷಭ್ ಪಂತ್ ನಾಯಕನಾದರೂ ಟಾಸ್ ಮಾತ್ರ ಗೆದ್ದಿಲ್ಲ. ಇಂದಿನ ಪಂದ್ಯದಲ್ಲೂ ಟಾಸ್ ಗೆದ್ದ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕೆ ಭಾರತ ಎರಡು ಬದಲಾವಣೆ ಮಾಡಿಕೊಂಡಿದೆ. ಶುಭಮನ್ ಗಿಲ್ ಸ್ಥಾನಕ್ಕೆ ಸಾಯಿ ಸುದರ್ಶನ್ ಮತ್ತು ಅಕ್ಸರ್ ಪಟೇಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದೆ.