ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸ್ಪಿನ್ನರ್ ಗಳೇ ಕಾಪಾಡಿದರು. ಮೊದಲ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದೆ.
ಆಫ್ರಿಕಾದ ಆರಂಭ ಉತ್ತಮವಾಗಿಯೇ ಇತ್ತು. ಆಡನ್ ಮಾರ್ಕರಮ್ 38, ರಿಕಲ್ಟನ್ 35 ರನ್ ಗಳಿಸಿದರು. ಒಂದು ಹಂತದಲ್ಲಿ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಆಫ್ರಿಕಾ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿತ್ತು. ಆದರೆ ಸ್ಪಿನ್ನರ್ ಗಳು ಭಾರತಕ್ಕೆ ಆಪತ್ಬಾಂಧವರಾದರು.
ಅದರಲ್ಲೂ ಕುಲದೀಪ್ ಯಾದವ್ 3 ವಿಕೆಟ್ ಗಳನ್ನು ನಿಯಮಿತವಾಗಿ ಕೀಳುವ ಮೂಲಕ ಆಫ್ರಿಕಾ ರನ್ ಓಟಕ್ಕೆ ಕಡಿವಾಣ ಹಾಕಿದರು. ಇದರಿಂದಾಗಿ ಆಫ್ರಿಕಾದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಬಿತ್ತು. ಕುಲದೀಪ್ ಗೆ ಸಾಥ್ ನೀಡಿದ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಇದಕ್ಕೆ ಮೊದಲು ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡಾ ತಲಾ 1 ವಿಕೆಟ್ ಗಳಿಸಿದ್ದರು.
ಇದರಿಂದಾಗಿ ದಿನದಂತ್ಯಕ್ಕೆ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಲಷ್ಟೇ ಶಕ್ತವಾಗಿದೆ. ಕಳೆದ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ.