ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಹಾಗಿದ್ದರೂ ಇಂದು ನಡೆಯುವ ಪಂದ್ಯಗಳು ಶ್ರೀಲಂಕಾ ತಂಡಕ್ಕೆ ಮಹತ್ವದ್ದು ಯಾಕೆ ಗೊತ್ತಾ?
ಆಸ್ಟ್ರೇಲಿಯಾ ಈಗಾಗಲೇ 8 ಪಂದ್ಯಗಳಿಂದ 6 ಗೆಲುವು ಸಾಧಿಸಿ ಸೆಮಿಫೈನಲ್ ಗೇರಿದೆ. ಹೀಗಾಗಿ ಇಂದಿನ ಸೋಲು-ಗೆಲುವು ಆ ತಂಡ ಸೆಮಿಫೈನಲ್ ಹಾದಿಗೆ ಭಂಗ ತಾರದು.
ಅತ್ತ ಬಾಂಗ್ಲಾದೇಶ ಈಗಾಗಲೇ 8 ರಿಂದ ಕೇವಲ 2 ಗೆಲುವು ಕಂಡಿದ್ದು, ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಹೀಗಾಗಿ ಇಂದಿನ ಫಲಿತಾಂಶ ಬಾಂಗ್ಲಾಕ್ಕೆ ಈ ವಿಶ್ವಕಪ್ ನಲ್ಲಿ ಹೆಚ್ಚಿನ ಲಾಭ/ನಷ್ಟವಾಗದು. ಆದರೆ ನಿಜವಾದ ನಷ್ಟವಾಗುವುದು ಲಂಕಾಗೆ. ಒಂದು ವೇಳೆ ಇಂದು ಬಾಂಗ್ಲಾ ಹೀನಾಯವಾಗಿ ಸೋತರೆ ಲಂಕಾಗೆ 2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಅನುಕೂಲವಾಗಲಿದೆ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಈ ವಿಶ್ವಕಪ್ ನ ಅಗ್ರ 7 ತಂಡಗಳಿಗೆ ಮಾತ್ರ ಅವಕಾಶವಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿರುವ ಲಂಕಾಗೆ ಈ ಅವಕಾಶ ಸಿಗುವ ಸಾಧ‍್ಯತೆ ತೀರಾ ಕಡಿಮೆ. ಇದಕ್ಕೆ ಬಾಂಗ್ಲಾ ಹೀನಾಯವಾಗಿ ಸೋತರೆ ಮತ್ತು ಇಂದು ನಡೆಯುವ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಹೀನಾಯವಾಗಿ ಸೋತರೆ ಮಾತ್ರ ಸಾಧ‍್ಯ. ಈ ಪಂದ್ಯ ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದೆ.