ಚೆನ್ನೈ: ಐಪಿಎಲ್ ನ ಪ್ರಬಲ ತಂಡವೆಂದು ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಮಕಾಡೆ ಮಲಗಿದೆ. ನಾಯಕರಾಗಿ ಧೋನಿ ತಂಡಕ್ಕೆ ಬಂದರೂ ಲಕ್ ಬದಲಾಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯವನ್ನೂ 8 ವಿಕೆಟ್ ಗಳಿಂದ ಸೋಲುವ ಮೂಲಕ ಸಿಎಸ್ ಕೆ ಬೇಡದ ದಾಖಲೆ ಬರೆಯಿತು.
ಋತುರಾಜ್ ಗಾಯಕ್ ವಾಡ್ ಗಾಯಗೊಂಡ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಧೋನಿ ತಂಡದ ನಾಯಕತ್ವ ವಹಿಸಿದ್ದರು. ಅವರು ನಾಯಕರಾದಾಗ ತಂಡ ಗೆದ್ದೇ ಬಿಟ್ಟಿತು ಎನ್ನುವ ಮಟ್ಟಿಗೆ ಸಿಎಸ್ ಕೆ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಧೋನಿ ನಾಯಕರಾಗಿದ್ದರಿಂದ ಪವಾಡವೇನೂ ನಡೆಯಲಿಲ್ಲ. ಬದಲಿಗೆ ಮತ್ತಷ್ಟು ಕಳಪೆ ಪ್ರದರ್ಶನ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಚೆನ್ನೈ ಪರ ಶಿವಂ ದುಬೆ ಅಜೇಯ 31 ಮತ್ತು ವಿಜಯ್ ಶಂಕರ್ 29 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ. ಧೋನಿ ಕೊಡುಗೆ ಕೇವಲ 1 ರನ್.
ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ ಕೆಕೆಆರ್ ಕೇವಲ 10.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 107 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸಿಎಸ್ ಕೆ ಒಂದೇ ಐಪಿಎಲ್ ನಲ್ಲಿ ಸತತ ಐದು ಪಂದ್ಯ ಮತ್ತು ಚಿಪಾಕ್ ಮೈದಾನದಲ್ಲಿ ಸತತ ಮೂರು ಸೋಲುಗಳನ್ನು ಕಾಣುವ ಮೂಲಕ ಬೇಡದ ದಾಖಲೆ ಮಾಡಿತು. ಇದೇ ಮೊದಲ ಬಾರಿಗೆ ಸಿಎಸ್ ಕೆ ಸತತವಾಗಿ ಇಷ್ಟು ಪಂದ್ಯ ಸೋಲುತ್ತಿದೆ. ಇಷ್ಟು ದಿನ ಪ್ರಬಲ ತಂಡವಾಗಿದ್ದ ಸಿಎಸ್ ಕೆ ಈಗ ದುರ್ಬಲ ತಂಡವಾಗಿ ಗೋಚರಿಸುತ್ತಿರುವುದು ವಿಪರ್ಯಾಸ.