ಬೆಂಗಳೂರು: ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ವಿರಾಟ್ ಕೊಹ್ಲಿ ಮೆಂಟರ್ ದಿನೇಶ್ ಕಾರ್ತಿಕ್ ಗೆ ದೂರಿದ ವಿಡಿಯೋವೊಂದು ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು ಆರ್ ಸಿಬಿ 6 ವಿಕೆಟ್ ಗಳಿಂದ ಸೋತಿದೆ. ಕೆಎಲ್ ರಾಹುಲ್ ಭರ್ಜರಿ 93 ರನ್ ಗಳಿಸಿ ಡೆಲ್ಲಿಗೆ ಗೆಲುವು ಕೊಡಿಸಿದರು. ಆದರೆ ಡೆಲ್ಲಿ ಬ್ಯಾಟಿಂಗ್ ವೇಳೆ ಆರ್ ಸಿಬಿ ಹಿರಿಯ ಆಟಗಾರ ಕೊಹ್ಲಿ ತಂಡದ ನಾಯಕನ ಬಗ್ಗೆ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ.
ಡೆಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ 16 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಇದಕ್ಕಿಂತ ಮೊದಲಿನ ಓವರ್ ನಲ್ಲಿ ಫೀಲ್ಡಿಂಗ್ ಸೆಟ್ ಮಾಡಿದ್ದು ಮತ್ತು ಬೌಲಿಂಗ್ ಚೇಂಜ್ ಮಾಡಿದ್ದು ಕೊಹ್ಲಿಗೆ ಇಷ್ಟವಾಗಿರಲಿಲ್ಲ. ಇದೇ ಕಾರಣಕ್ಕೆ ನಾಯಕ ರಜತ್ ಬಗ್ಗೆ ಮೆಂಟರ್ ದಿನೇಶ್ ಕಾರ್ತಿಕ್ ಬಳಿ ತಮ್ಮ ಆಕ್ರೋಶ ಹೊರಹಾಕಿದರು.
ಬೌಂಡರಿ ಬಳಿ ನಿಂತಿದ್ದ ಮೆಂಟರ್ ದಿನೇಶ್ ಕಾರ್ತಿಕ್ ಜೊತೆ ಬೌಲಿಂಗ್ ಚೇಂಜ್ ಬಗ್ಗೆ ಅಸಮಾಧಾನ ತೋಡಿಕೊಳ್ಳುತ್ತಿದ್ದರು. ಇದಕ್ಕೆ ಕಾಮೆಂಟೇಟರ್ ಕೂಡಾ ಪ್ರತಿಕ್ರಿಯಿಸಿದ್ದು, ಕೊಹ್ಲಿ ಹಿರಿಯ ಆಟಗಾರ ನೇರವಾಗಿ ಪಾಟೀದಾರ್ ಗೇ ಹೇಳಬಹುದು. ಅದನ್ನು ಬಿಟ್ಟು ಕೋಚ್ ಬಳಿ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ.