ಬೆಂಗಳೂರು: ಐಪಿಎಲ್ 2025 ರಲ್ಲಿ ಇಂದು ಕನ್ನಡಿಗರ ಪಾಲಿಗೆ ಉಗುಳಲೂ ಆಗದ ನುಂಗಲೂ ಆಗದ ಮ್ಯಾಚ್. ಒಂದು ಕಡೆ ಆರ್ ಸಿಬಿ ಆಗಿದ್ದರೆ ಅದಕ್ಕೆ ಎದುರಾಳಿಯಾಗಿ ಕನ್ನಡಿಗ ಕೆಎಲ್ ರಾಹುಲ್ ಅವರ ಡೆಲ್ಲಿ ಕ್ಯಾಪಿಟಲ್ಸ್. ತನ್ನನ್ನು ಕಡೆಗಣಿಸಿದ ಆರ್ ಸಿಬಿಗೆ ಕೆಎಲ್ ರಾಹುಲ್ ರೆಡಿಯಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಈ ಐಪಿಎಲ್ ನಲ್ಲಿ ತವರು ಆರ್ ಸಿಬಿ ತಂಡವನ್ನು ಸೇರಿಕೊಳ್ಳಬೇಕೆಂದು ಕೆಎಲ್ ರಾಹುಲ್ ಗೆ ಕನಸಿತ್ತು. ಆದರೆ ಮೆಗಾ ಹರಾಜಿನಲ್ಲಿ ಆರ್ ಸಿಬಿ ಅವರನ್ನು ಕೈ ಬಿಟ್ಟಿದ್ದು ಕನ್ನಡಿಗರಿಗೆ ನಿರಾಸೆ ತಂದಿತ್ತು. ಆದರೆ ಈಗ ರಾಹುಲ್ ಡೆಲ್ಲಿ ತಂಡದ ಸ್ಟಾರ್ ಕ್ರಿಕೆಟಿಗ.
ಇಂದು ತವರಿನಲ್ಲೇ ಪಂದ್ಯ ನಡೆಯುತ್ತಿರುವುದರಿಂದ ರಾಹುಲ್ ಗೆ ಹೊಸ ಉತ್ಸಾಹವಿದೆ. ಆದರೆ ಅಭಿಮಾನಿಗಳಿಗೆ ಮಾತ್ರ ಯಾರನ್ನು ಬೆಂಬಲಿಸುವುದು ಎಂಬ ಸಂಕಟ. ಹಾಗಿದ್ದರೂ ಆರ್ ಸಿಬಿ ಅಭಿಮಾನಿಗಳ ನಿಷ್ಠೆಯೇನೂ ಬದಲಾಗಲ್ಲ.
ಚಿನ್ನಸ್ವಾಮಿ ಆರ್ ಸಿಬಿಗೆ ಅನ್ ಲಕ್ಕಿ
ಎಲ್ಲಾ ಐಪಿಎಲ್ ತಂಡಗಳೂ ತವರಿನಲ್ಲಿ ಬಲಿಷ್ಠವಾಗಿದ್ದರೆ ಆರ್ ಸಿಬಿ ಮಾತ್ರ ತವರಿನಲ್ಲಿ ಮುಗ್ಗರಿಸುತ್ತಲೇ ಬಂದಿದೆ. ಕಳೆದ ಪಂದ್ಯದಲ್ಲೂ ಗುಜರಾತ್ ವಿರುದ್ಧ ಸೋತಿತ್ತು. ಹೀಗಾಗಿ ಈಗ ಆರ್ ಸಿಬಿ ತವರಿನಲ್ಲಿ ಸೋಲುವ ಅಪವಾದ ತೊಡೆದು ಹಾಕಬೇಕಿದೆ. ಕಳೆದ ಪಂದ್ಯವನ್ನು ಮುಂಬೈ ವಾಂಖೆಡೆ ಮೈದಾನದಲ್ಲಿದ್ದ ಗೆದ್ದಿದ್ದ ಆರ್ ಸಿಬಿ ಇಂದೂ ಅದೇ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.
ಸೋಲರಿಯದ ಡೆಲ್ಲಿ
ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಈ ಐಪಿಎಲ್ ಕೂಟದಲ್ಲಿ ಸೋಲರಿಯದ ಸರದಾರನಂತೆ ಮೆರೆಯುತ್ತಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಅಕ್ಸರ್ ಪಟೇಲ್ ನಾಯಕತ್ವದಲ್ಲಿ ಇದುವರೆಗೆ ಆಡಿದ ಮೂರೂ ಪಂದ್ಯವನ್ನು ಗೆದ್ದು ಬೀಗಿದೆ. ಇದೀಗ ಆರ್ ಸಿಬಿಯನ್ನು ಸೋಲಿಸಿ ತನ್ನ ಅಗ್ರಸ್ಥಾನ ಕಾಯ್ದುಕೊಳ್ಳುವ ಭರವಸೆಯಲ್ಲಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.