ಬೆಂಗಳೂರು: ಐಪಿಎಲ್ 2025 ರ ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತಿರುವ ಕೆಎಲ್ ರಾಹುಲ್ ಗೆ ಅಭಿಮಾನಿಗಳು ಈ ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಬೇಡಿ ಎಂದು ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳು ಹೀಗೆ ಸಲಹೆ ನೀಡುವುದಕ್ಕೂ ಕಾರಣವಿದೆ.
ಐಪಿಎಲ್ 2025 ರಲ್ಲಿ ನಾಳೆ ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಆಡುತ್ತಿದ್ದಾರೆ.
ಕೆಎಲ್ ರಾಹುಲ್ ಡೆಲ್ಲಿ ತಂಡದ ಪ್ರಮುಖ ಬ್ಯಾಟಿಗ. ಕಳೆದ ಪಂದ್ಯದಲ್ಲೂ ಅವರು ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನ ರೂವಾರಿಯಾಗಿದ್ದರು. ಇದೀಗ ತವರಿನಲ್ಲೇ ನಡೆಯುವ ಪಂದ್ಯಕ್ಕೆ ಸಿದ್ಧತೆ ನಡೆಸುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಆರ್ ಸಿಬಿ ಅಭಿಮಾನಿಗಳಂತೂ ದಯವಿಟ್ಟು ಈ ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಬೇಡಿ ಎಂದು ಮನವಿ ಮಾಡಿದ್ದಾರೆ. ನೀವು ಕನ್ನಡದ ಸಿಂಹ, ನಿಮಗೆ ಚಿನ್ನಸ್ವಾಮಿ ಪಿಚ್ ಚಿರಪರಿಚಿತ. ಆದರೆ ಈ ಒಂದು ಪಂದ್ಯದಲ್ಲಿ ನಿಮ್ಮ ಎಂದಿನ ಫಾರ್ಮ್ ಪ್ರದರ್ಶಿಸಬೇಡಿ. ನೀವು ಹಾಗೆ ಮಾಡಿದಲ್ಲಿ ನಮ್ಮ ಆರ್ ಸಿಬಿ ಸೋಲುತ್ತೆ ಎಂದಿದ್ದಾರೆ. ಮತ್ತೆ ಕೆಲವರು ಆರ್ ಸಿಬಿ ನಿಮ್ಮನ್ನು ಕಡೆಗಣಿಸಿದ್ದಕ್ಕೆ ಬ್ಯಾಟಿಂಗ್ ಮೂಲಕ ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾರೆ.