ಚೆನ್ನೈ: ಐಪಿಎಲ್ ಆವೃತ್ತಿಯ ಇಂದಿನ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ದುಕೊಂಡಿತು.
6 ವಿಕೆಟ್‌ಗಳ ನಷ್ಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 183ರನ್‌ಗಳ ಸವಾಲಿನ ಮೊತ್ತವನ್ನು ಚೆನ್ನೈಗೆ ನೀಡಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅಮೋಘ ಅರ್ಧಶತಕದ (77) ಮೂಲಕ ಮತ್ತೇ ಲಯ ಕಂಡುಕೊಂಡಿದ್ದಾರೆ.
ಜೇಕ್ ಫ್ರೆಸರ್-ಮೆಕ್‌ಗುರ್ಕ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಈ ಸಂದರ್ಭದಲ್ಲಿ ಅಭಿಷೇಕ್ ಪೊರೆಲ್ ಜೊತೆಗೂಡಿದ ರಾಹುಲ್ ದ್ವಿತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.
ಪೊರೆಲ್ 33 ರನ್ ಗಳಿಸಿ ಔಟ್ ಆದರು. ಬಳಿಕ ನಾಯಕ ಅಕ್ಷರ್ ಪಟೇಲ್ 21 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ರಾಹುಲ್, ಬಳಿಕ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. ಕೆಳ ಕ್ರಮಾಂಕದಲ್ಲಿ ಸಮೀರ್ ರಿಜ್ವಿ 20 ಹಾಗೂ ಟ್ರಿಸ್ಟನ್ ಸ್ಟಬ್ಸ್ ಅಜೇಯ 24 ರನ್ ಗಳಿಸಿದರು.
ಚೆನ್ನೈ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ರಾಹುಲ್ 51 ಎಸೆತಗಳಲ್ಲಿ 77 ರನ್ ಗಳಿಸಿ, ತಂಡಕ್ಕೆ 183 ರನ್‌ಗಳನ್ನು ತಂದುಕೊಡುವಲ್ಲಿ ನೆರವಾದರು. ರಾಹುಲ್ ಮೂರು ಸಿಕ್ಸರ್ ಹಾಗೂ ಆರು ಬೌಂಡರಿ ಗಳಿಸಿ ಅಬ್ಬರಿಸಿದರು.