ಅಹಮದಾಬಾದ್: ಸಾಯಿ ಸುದರ್ಶನ್ ಅವರ ಅಮೋಘ ಬ್ಯಾಟಿಂಗ್ ಬಳಿಕ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ 58 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.
ಮೊದಲ ಪಂದ್ಯ ಸೋತು ಸತತ ನಾಲ್ಕು ಪಂದ್ಯಗಳನ್ನು ಗೆದ್ದ ಗುಜರಾತ್ ತಂಡವು 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಏಳನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ಡುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 217 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು 19.2 ಓವರ್‌ಗಳಲ್ಲಿ 159 ರನ್ ಗಳಿಸಿ ಹೋರಾಟವನ್ನು ಮುಗಿಸಿತು.
ರಾಜಸ್ಥಾನ ಪರ ನಾಯಕ ಸಂಜು ಸ್ಯಾಮ್ಸನ್ 42 ಮತ್ತು ಸಿಮ್ರಾನ್ ಹೆಲ್ಮೆಟೆರ್ 52 ರನ್ ಗಳಿಸಿ ಕೊಂಚ ಹೋರಾಟ ತೋರಿದರು. ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಪಡೆದರು. ರಶೀದ್ ಖಾನ್ ಮತ್ತು ಸಾಯಿ ಕಿಶೋರ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ 2 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ 53 ಎಸೆತಗಳಲ್ಲಿ 82 ರನ್ ಸಿಡಿಸಿದರು. ಅವರ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ಉಳಿದಂತೆ ಜೋಸ್ ಬಟ್ಲರ್ ಮತ್ತು ಶಾರೂಕ್ ಖಾನ್ ತಲಾ 36 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು.
ರಾಜಸ್ಥಾನ ರಾಯಲ್ಸ್ ತಂಡದ ತುಷಾರ್ ದೇಶ್‌ಪಾಂಡೆ, ಮತೀಷಾ ತೀಕ್ಷಣ ಎರಡು ವಿಕೆಟ್ ಪಡೆದು ಮಿಂಚಿದರು. ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಗುಜರಾತ್ ತಂಡವು ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದರೆ, ರಾಜಸ್ಥಾನ ತಂಡವು ನಾಲ್ಕರಲ್ಲಿ ಎರಡನ್ನು ಗೆದ್ದಿದೆ.