ಚೆನ್ನೈ: ಕೆಲ ವರ್ಷಗಳ ಹಿಂದೆ ಅದ್ಭುತ ಫಿನಿಷರ್ ಎಂದು ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಶನಿವಾರದ ಪಂದ್ಯದಲ್ಲಿ ಅವರು ಅಕ್ಷರಶಃ ಪರದಾಡಿದರು. ಪಂದ್ಯವನ್ನು ಗೆಲ್ಲಿಸಿಕೊಡುವ ಅವಕಾಶ ಕೈಯಲ್ಲಿದ್ದರೂ ಟೆಸ್ಟ್ ಇನ್ನಿಂಗ್ಸ್‌ನಂತೆ ಆಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಎಂ.ಎಸ್. ಧೋನಿ ಅವರ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಬ್ಯಾಟಿಂಗ್‌ನಲ್ಲಿ ತಡಕಾಡುತ್ತಿರುವ ಧೋನಿ ಬೇಗನೇ ನಿವೃತ್ತಿ ಪಡೆಯಲಿ ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 183 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಚೆನ್ನೈ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು.
ಹನ್ನೊಂದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರವೀಂದ್ರ ಜಡೇಜ (2 ರನ್) ಔಟಾದ ನಂತರ ಧೋನಿ ಕ್ರೀಸ್‌ಗೆ ಇಳಿದರು. ಈ ಹಂತದಲ್ಲಿ ತಂಡದ ಗೆಲುವಿಗೆ 56 ಎಸೆತಗಳಲ್ಲಿ 110 ರನ್ ಬೇಕಿತ್ತು. ಆದಾಗ್ಯೂ ಧೋನಿ, ಬೀಸಾಟಕ್ಕೆ ಒತ್ತು ನೀಡಲಿಲ್ಲ. ಗುರಿ ಬೆನ್ನಟ್ಟಿ ತಂಡಕ್ಕೆ ಗೆಲುವು ತಂದುಕೊಡುವುದರಲ್ಲಿ ನಿಸ್ಸೀಮ ಎನಿಸಿರುವ ಅವರು, ಮೊದಲ 18 ಎಸೆತಗಳಲ್ಲಿ ಗಳಿಸಿದ್ದು 14 ರನ್ ಮಾತ್ರ. 26 ಎಸೆತಗಳಲ್ಲಿ ಕೇವಲ 30 ರನ್ ಗಳಿಸಿ ಧೋನಿ ಔಟಾಗದೇ ಉಳಿದರು.
ಮತ್ತೊಂದೆಡೆ ಶಂಕರ್ ಸಹ ಪರಿಣಾಮಕಾರಿ ಆಟವಾಡಲಿಲ್ಲ. ಒಟ್ಟು 54 ಎಸೆತ ಎದುರಿಸಿದ ಅವರು 69 ರನ್ ಗಳಿಸಿದರೂ ತಮ್ಮ ತಂಡಕ್ಕೆ ಜಯ ತಂದುಕೊಡಲು ವಿಫಲವಾದರು.
ಪ್ರತಿ ಓವರ್‌ಗೆ 10ಕ್ಕಿಂತ ಹೆಚ್ಚಿನ ದರದಲ್ಲಿ ರನ್ ಬೇಕಿದ್ದರೂ ಒಂಟಿ ರನ್ ಗಳಿಸುವ ಧೋನಿ, ಸಿಎಸ್‌ಕೆ ಹೊರೆಯಾಗುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.