ಲಖನೌ: ಐಪಿಎಲ್‌ನ ಮೆಗಾ ಹರಾಜಿನಲ್ಲಿ ದಾಖಲೆಯ ₹27 ಕೋಟಿ ಮೊತ್ತಕ್ಕೆ ಲಖನೌ ಸೂಪರ್ ಜೈಂಟ್ಸ್ ತಂಡದ ಪಾಲಾದ ರಿಷಭ್ ಪಂತ್ ಈ ಆವೃತ್ತಿಯಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಅವರು ಸಾಲು ಸಾಲು ಟೀಕೆಗಳಿಗೆ ಗುರಿಯಾಗಿದ್ದಾರೆ.
ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಖನೌ ತಂಡದ ನಾಯಕ ರಿಷಭ್ ಪಂತ್ ಅವರೊಂದಿಗೆ ಮುಂಬೈ ತಂಡ ಮಾಜಿ ನಾಯಕ ರೋಹಿತ್ ಶರ್ಮಾ ಅವರೂ ದೊಡ್ಡ ಮೊತ್ತ ಗಳಿಸಲು ವಿಫಲರಾಗುತ್ತಿದ್ದಾರೆ. ಏಕನಾ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಈ ಇಬ್ಬರು ಸ್ಟಾರ್ ಆಟಗಾರರ ಮೇಲೆ ದೃಷ್ಟಿ ನೆಟ್ಟಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಮೂರು ಪಂದ್ಯಗಳಿಂದ ಒಂದು ಪಂದ್ಯ ಗೆದ್ದು ಎರಡು ಪಾಯಿಂಟ್ಸ್ ಅಷ್ಟೇ ಗಳಿಸಿದೆ. ಭಾರತ ತಂಡದ ನಾಯಕ ರೋಹಿತ್ ವಿಫಲರಾಗುತ್ತಿರುವುದು ತಂಡಕ್ಕೆ ಕಳವಳ ಮೂಡಿಸಿದೆ.
ಲಖನೌ ತಂಡದ ಕಥೆಯೂ ಭಿನ್ನವಾಗಿಲ್ಲ. ಈ ತಂಡವೂ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿದೆ. ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ ನಾಯಕ ಪಂತ್ ತಿಣುಕಾಡುತ್ತಿರುವುದು ತಂಡದ ಬ್ಯಾಟಿಂಗ್ ಸರದಿಯ ಮೇಲೆ ಒತ್ತಡ ಹೆಚ್ಚಿಸಿದೆ.ತಂಡ ಬ್ಯಾಟಿಂಗ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಮೇಲೆ ಹೆಚ್ಚಿನ ಹೊಣೆಯಿದೆ.