ವಿಶಾಖಪಟ್ಟಣ: ಐಪಿಎಲ್‌ನಲ್ಲಿ ಇಂದು ಮಧ್ಯಾಹ್ನದ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.
ಐಪಿಎಲ್‌ನಲ್ಲಿ ಈ ಆವೃತ್ತಿಯಲ್ಲಿ ಟಾಸ್ ಗೆದ್ದ ಬಹುತೇಕ ತಂಡಗಳು ಫೀಲ್ಡಿಂಗ್ ಆಯ್ಡುಕೊಂಡಿದ್ದವು. ಇದೇ ಮೊದಲ ಬಾರಿ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಸ್ಪೋಟಕ ಬ್ಯಾಟರ್‌ಗಳನ್ನು ಒಳಗೊಂಡ ಸನ್‌ರೈಸರ್ಸ್ ತಂಡವು ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯಿದೆ.
ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡಿರುವ ಸನ್‌ರೈಸರ್ಸ್ ಇಂದಿನ ರಣರೋಚಕ ಹೋರಾಟಕ್ಕೆ ಸಿದ್ಧವಾಗಿದೆ. ಲಖನೌ ತಂಡವನ್ನು ಮೊದಲ ಪಂದ್ಯದಲ್ಲಿ ಬಗ್ಗಬಡಿದ ಡೆಲ್ಲಿ ತಂಡವು ಹೈದರಾಬಾದ್ ವಿರುದ್ಧ ಸವಾರಿ ಮಾಡಲು ಸಜ್ಜಾಗಿದೆ.
ಕಳೆದ ಬಾರಿ ಲಖನೌ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಲಖನೌ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಮಗುವಿನ ನಿರೀಕ್ಷೆಯಿಂದ ಹೊರಗುಳಿದಿದ್ದರು. ಸಮೀರ್ ರಿಜ್ವಿ ತಂಡದಿಂದ ಹೊರಗುಳಿದಿದ್ದಾರೆ.
ವಿಶಾಖಪಟ್ಟಣದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎರಡನೇ ತವರು ಮೈದಾನವಾಗಿದೆ. ಈ ಮೈದಾನವು ದೊಡ್ಡ ಸ್ಕೋರ್‌ಗಳಿಗೆ ಹೆಸರುವಾಸಿಯಾಗಿದೆ. ದೆಹಲಿ ತಂಡ ಲಖನೌ ವಿರುದ್ಧ 210 ರನ್‌ಗಳ ಗುರಿಯನ್ನು ಸಾಧಿಸಿತ್ತು. ದೆಹಲಿ ಮತ್ತು ಹೈದರಾಬಾದ್ ನಡುವಿನ ಈ ಪಂದ್ಯದಲ್ಲೂ ಹೆಚ್ಚಿನ ಸ್ಕೋರಿಂಗ್ ಕಾಣಬಹುದು.