ಮುಂಬೈ: ಐಪಿಎಲ್‌ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಆವೃತ್ತಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಪರಾಭವಗೊಂಡಿದ್ದ ಮುಂಬೈ ತಂಡ, ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧವೂ ಮುಗ್ಗರಿಸಿತು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 8 ವಿಕೆಟ್‌ಗೆ 196 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಇಂಡಿಯನ್ಸ್ ತಂಡವು 160 ರನ್ ಗಳಿಸಿ ಹೋರಾಟವನ್ನು ಮುಗಿಸಿತು. 36 ರನ್ಗಳಿಂದ ಹಾರ್ದಿಕ್ ಪಾಂಡ್ಯ ಪಡೆ ಸೋಲೊಪ್ಪಿಕೊಂಡಿತು.
ಸತತ ಎರಡು ಪಂದ್ಯಗಳಲ್ಲಿ ಮುಂಬೈ ತಂಡ ಸೋಲುತ್ತಿದ್ದಂತೆ ತಂಡದ ಆಟಗಾರರಿಗೆ ನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯ ಪಾಠ ಮಾಡಿದ್ದಾರೆ. ಈ ಪಂದ್ಯದ ಸೋಲಿಗೆ ಬ್ಯಾಟರ್ಗಳು ಕಾರಣ ಎಂದು ನೇರವಾಗಿ ಹೇಳಿದ ಅವರು, ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಮೈದಾನದಲ್ಲಿ ವೃತ್ತಿಪರರಾಗಿ ಕಾಣಿಸಿಕೊಂಡಿಲ್ಲ. ಹಲವು ಸಾಮಾನ್ಯ ತಪ್ಪುಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಟೈಟಾನ್ಸ್ ಆರಂಭಿಕರನ್ನು ಹೊಗಳಿದ ಹಾರ್ದಿಕ್ ಪಾಂಡ್ಯ, ಅವರ ಓಪನರ್ಗಳು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಪವರ್ಪ್ಲೇನಲ್ಲೂ ಉತ್ತಮ ರನ್ ಕಲೆಹಾಕಿದರು. ಆದರೆ ನಮ್ಮ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದೀಗ ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದರಲ್ಲೂ ಬ್ಯಾಟರ್ಗಳು ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡಬೇಕಿದೆ. ಆರಂಭಿಕರು ಹೆಚ್ಚು ಜಾಗೃತೆಯಿಂದ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ ಎಂದು ಪಾಂಡ್ಯ ಪರೋಕ್ಷವಾಗಿ ರೋಹಿತ್‌ಗೆ ಹೇಳಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನ ಪೆವಿಲಿಯನ್ ಸೇರಿದ್ದ ಮುಂಬೈ ತಂಡದ ಆರಂಭಿಕ ರೋಹಿತ್ ಶರ್ಮಾ ಅವರು ಟೈಟನ್ಸ್ ವಿರುದ್ಧ ಕೇವಲ 8 ರನ್ ಗಳಿಸಿ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಟೀಕೆಗೆ ಗುರಿಯಾಗಿದ್ದಾರೆ.
ಸೋಮವಾರ ತಮ್ಮ ತವರು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡವು ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.