ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಹೈದರಾಬಾದ್ ಸಜ್ಜಾಗಿದೆ. ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ದಾಖಲೆಯ ರನ್ ಪೇರಿಸಿದ್ದ ಸನ್‌ರೈಸರ್ಸ್ ಇಂದು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಆವೃತ್ತಿಯಲ್ಲಿ ಹೈದರಾಬಾದ್ ತಂಡವು ಐಪಿಎಲ್‌ನಲ್ಲಿ 287 ರನ್ ಪೇರಿಸಿ ಗರಿಷ್ಠ ರನ್ ದಾಖಲೆ ನಿರ್ಮಿಸಿತ್ತು. ಈ ಬಾರಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ 286 ರನ್ ಗಳಿಸಿ ತನ್ನದೇ ಹೆಸರಿನಲ್ಲಿದ್ದ ಅತ್ಯಧಿಕ ಮೊತ್ತದ ದಾಖಲೆಯನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡಿತು. ಆ ಪಂದ್ಯವನ್ನು 44 ರನ್‌ಗಳ ಜಯಭೇರಿ ಬಾರಿಸಿತ್ತು.
ಉಪ್ಪಳದ ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಶಾನ್ ಕಿಶನ್ ಹಾಲಿ ಐಪಿಎಲ್‌ನ ಮೊದಲ ಶತಕ (106, 47ಎ) ಹೊಡೆದರು. ಕಿಶನ್ ಜೊತೆ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅಂಥ ಸ್ಫೋಟಕ ಆಟವಾಡಬಲ್ಲ ಪಡೆ ಆ ತಂಡದಲ್ಲಿದೆ. ಎರಡನೇ ಪಂದ್ಯದಲ್ಲೂ ಅಬ್ಬರಿಸಿಲು ಆತಿಥೇಯ ತಂಡ ಸನ್ನದ್ಧವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರು ರೋಚಕ ಹೋರಾಟದಲ್ಲಿ ಒಂದು ವಿಕೆಟ್‌ನಿಂದ ಸೋತ ಲಖನೌ ತಂಡ ಗೆಲುವಿನ ಖಾತೆ ತೆರೆಯುವ ಛಲದಲ್ಲಿದೆ. ಲಖನೌ ತಂಡದ ನಾಯಕ ಪಂತ್ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಕೊನೆಯ ಓವರಿನಲ್ಲಿ ಸ್ಟಂಪಿಂಗ್ ಸಹ ಕೈತಪ್ಪಿದ್ದು ದುಬಾರಿಯಾಯಿತು. ಈ ಬಾರಿ ಲಯಕ್ಕೆ ಮರಳುವ ವಿಶ್ವಾಸವಿದೆ. ಇಂದು ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.