ಹೈದರಾಬಾದ್: ಹೊಡಿಬಡಿ ಆಟಕ್ಕೆ ಹೆಸರಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಇಂದು ತವರಿನಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಲಿ ಚಾಂಪಿಯನ್ ಹೈದರಾಬಾದ್ ಬ್ಯಾಟಿಂಗ್ ಮಾಡಲಿದೆ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಆತಿಥೇಯ ತಂಡವು ಬೃಹತ್ ಮೊತ್ತ ಕಲೆಹಾಕುವತ್ತ ಚಿತ್ತ ಹರಿಸಿದೆ. ಗಾಯಾಳಾಗಿದ್ದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಸ್ಪಿನ್ನರ್ ಆ್ಯಡಂ ಜಂಪಾ ಅವರು ಬೌಲಿಂಗ್ ಶಕ್ತಿಯಾಗಿದ್ದಾರೆ.
ರಾಜಸ್ಥಾನ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದರಿಂದ ಬ್ಯಾಟಿಂಗ್ ಬಲ ಕೊಂಚ ಕಡಿಮೆಯಾಗಿದೆ. ಹೀಗಾಗಿ, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ನಿತೀಶ್ ರಾಣಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಐಪಿಎಲ್‌ನಲ್ಲಿ ಒಟ್ಟು 20 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 11 ಬಾರಿ ಹೈದರಾಬಾದ್ ತಂಡ ಗೆದ್ದರೆ, 9 ಬಾರಿ ರಾಯಲ್ಸ್ ತಂಡ ಜಯಿಸಿದೆ. ಕಳೆದ ಆವೃತ್ತಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು ಎರಡೂ ಪಂದ್ಯದಲ್ಲೂ ಸನ್‌ರೈಸರ್ಸ್ ಪಾರಮ್ಯ ಮೆರೆದಿದೆ.