ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ ಮಾಡಿದೆ. ಎರಡನೇ ದಿನವಾದ ಇಂದು ರಾತ್ರಿ ನಡೆಯುವ ಪಂದ್ಯದಲ್ಲಿ ಐಪಿಎಲ್‌ನಲ್ಲಿ ತಲಾ ಐದು ಬಾರಿ ಕಿರೀಟ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 37 ವರ್ಷದ ರೋಹಿತ್ ಶರ್ಮಾ ಅವರು ಕಳೆದ ಆವೃತ್ತಿ ತನಕ ಮುಂಬೈ ತಂಡವನ್ನು ಮುನ್ನಡೆಸಿದ್ದು, ಈಗ ಬ್ಯಾಟರ್ ಆಗಿ ಪಾತ್ರ ನಿರ್ವಹಿಸುವರು. 43 ವರ್ಷದ ಧೋನಿ ಅವರು ಹಿಂದಿನ ಆವೃತ್ತಿತನಕ ಚೆನ್ನೈ ತಂಡವನ್ನು ಮುನ್ನಡೆಸಿದ್ದು, ಈಗ ವಿಕೆಟ್ ಕೀಪರ್ ಮತ್ತು ಫಿನಿಷರ್ ಪಾತ್ರ ನಿರ್ವಹಿಸಲಿದ್ದಾರೆ.
ಚೆನ್ನೈ ತಂಡವನ್ನು ಯುವ ಆಟಗಾರ ಋತುರಾಜ್ ಗಾಯಕವಾಡ ಮುನ್ನಡೆಸುತ್ತಿದ್ದು, ಸ್ಪಿನ್ ವಿಭಾಗದ ಮೇಲೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿದೆ. ರವೀಂದ್ರ ಜಡೇಜ ಅವರೊಂದಿಗೆ ಆಫ್‌ಸ್ಪಿನ್ ದಂತಕಥೆ ಆರ್. ಅಶ್ವಿನ್, ನೂರ್ ಅಹಮದ್, ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತು ದೀಪಕ್ ಹೂಡಾ ತಂಡದಲ್ಲಿದ್ದಾರೆ. ಆಲ್‌ರೌಂಡರ್ ರಚಿನ್ ರವೀಂದ್ರ ಕೂಡ ಇವರಿಗೆ ಜೊತೆ ನೀಡುತ್ತಾರೆ. ನಾಯಕ ಋತುರಾಜ್, ರಾಹುಲ್ ತ್ರಿಪಾಠಿ, ಡೆವೊನ್ ಕಾನ್ವೆ ಹಾಗೂ ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಮುಂಬೈ ತಂಡಕ್ಕೆ ಪಂದ್ಯ ಆರಂಭಕ್ಕೂ ಮುನ್ನ ಆಘಾತ ಎದುರಾಗಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯುವುದು ಖಚಿತವಾಗಿಲ್ಲ. ಮತ್ತೊಂದೆಡೆ ನಾಯಕ ಹಾರ್ದಿಕ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸುವರು. ಇದರಿಂದಾಗಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಅವರ ಮೇಲೆ ಅವಲಂಬಿತವಾಗಬಹುದು. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಸೂರ್ಯ, ರೋಹಿತ್, ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್ ಅವರು ಅಬ್ಬರಿಸುವ ನಿರೀಕ್ಷೆ ಇದೆ.