ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಿಸಲು ಕಲರ್ಸ್ ಕನ್ನಡ ವಾಹಿನಿ ಜನಪ್ರಿಯ ಧಾರವಾಹಿಯೊಂದನ್ನು ಮುಕ್ತಾಯಗೊಳಿಸುವ ನಿರ್ಧಾರಕ್ಕೆ ಬಂದಿದೆ.
ಪ್ರತೀ ಬಾರಿಯೂ ಬಿಗ್ ಬಾಸ್ ಶೋ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತದೆ. ಹೀಗಾಗಿ ಬಿಗ್ ಬಾಸ್ ಆರಂಭವಾಗುವ ಸಂದರ್ಭದಲ್ಲಿ ಎರಡು ಧಾರವಾಹಿಗಳನ್ನು ಮುಗಿಸುವುದು ಅನಿವಾರ್ಯವಾಗುತ್ತಿದೆ. ಅದೇ ರೀತಿ ಈ ಬಾರಿಯೂ ಜನಪ್ರಿಯ ಧಾರವಾಹಿಯನ್ನು ಮುಗಿಸಲು ವಾಹಿನಿ ತೀರ್ಮಾನಿಸಿದೆ.
ಬಿಗ್ ಬಾಸ್ ಶೋ ಆರಂಭಿಸಲು ಕಲರ್ಸ್ ವಾಹಿನಿ ತಯಾರಿ ಆರಂಭಿಸಿದೆ. ಇದಕ್ಕಾಗಿ ಈಗ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಕರಿಮಣಿಯನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದೆ. ಕರಿಮಣಿ ಧಾರವಾಹಿ ಇನ್ನು ಕೆಲವೇ ಎಪಿಸೋಡ್ ಗಳು ಮಾತ್ರ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಶೋ ಆರಂಭವಾಗುವವರೆಗೆ ಮಾತ್ರ ಧಾರವಾಹಿ ಇರಲಿದೆ. ಅದಾದ ಬಳಿಕ ಪ್ರಸಾರ ನಿಲ್ಲಿಸಲಿದೆ.
ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಕರ್ಣ-ಸಾಹಿತ್ಯ ಜೋಡಿಯ ಮುದ್ದಾದ ಕತೆ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಆದರೆ ಈಗ ಅನಿವಾರ್ಯವಾಗಿ ಕತೆ ಮುಗಿಸಲಾಗುತ್ತಿದೆ. ಇದಲ್ಲದೆ, ಇನ್ನೊಂದು ಧಾರವಾಹಿಯೂ ಮುಗಿಯಲಿದ್ದು ಅದು ಯಾವುದು ಎಂದು ಇನ್ನಷ್ಟೇ ತಿಳಿದುಬರಬೇಕಿದೆ.