ಬೆಂಗಳೂರು: ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಪತಿ ವಿರುದ್ಧ ಆರೋಪ ಮಾಡಿ ಬೆದರಿಕೆ ಹಾಕಿದ ಯುವಕನೊಬ್ಬನ ಮೇಲೆ ದೀಪಿಕಾ ತಾಯಿ ಪದ್ಮಲತಾ ದೂರು ನೀಡಿದ್ದಾರೆ.
ದೀಪಕ್ ಕುಮಾರ್ ಎಂಬ ಉದ್ಯಮಿಯೊಂದಿಗೆ ದೀಪಿಕಾ ದಾಸ್ ಇತ್ತೀಚೆಗೆ ಮದುವೆಯಾಗಿದ್ದರು. ಆದರೆ ದೀಪಕ್ ಕುಮಾರ್ ಮೋಸಗಾರ ಎಂದು ಯಶವಂತ್ ಎಂಬ ಯವಕ ದೀಪಿಕಾ ತಾಯಿ ಪದ್ಮಲತಾ ಅವರಿಗೆ ಕರೆ ಮಾಡಿ ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ನಿಮ್ಮ ಮಗಳನ್ನು ದೀಪಕ್ ಕುಮಾರ್ ಗೆ ಯಾಕೆ ಮದುವೆ ಮಾಡಿದ್ದೀರಿ. ಆತ ಮೋಸಗಾರ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಹಲವು ಪ್ರಕರಣ ಆತನ ಮೇಲಿದೆ, ಜೈಲಿಗೆ ಹೋಗಿ ಬಂದಿದ್ದಾನೆ ಎಂದೆಲ್ಲಾ ಹೇಳಿದ್ದ.
ಅಷ್ಟೇ ಅಲ್ಲ, ದೀಪಿಕಾ ದಾಸ್ ಗೂ ಕರೆ ಮಾಡಿದ್ದ ಆತ ಹಣಕ್ಕಾಗಿ ಬೇಡಿಕೆಟ್ಟಿದ್ದಲ್ಲದೆ, ಹಣ ಕೊಡದೇ ಇದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ್ದ. ದೀಪಕ್ ಕುಮಾರ್ ನಿಂದಾಗಿ ನನಗೆ ನಷ್ಟವಾಗಿದೆ ಎಂದು ಅವರ ಸ್ನೇಹಿತರಿಗೂ ಕರೆ ಮಾಡಿದ್ದಾನೆ.
ಹೀಗಾಗಿ ತಮ್ಮ ಅಳಿಯನ ಬಗ್ಗೆ ಇಲ್ಲ ಸಲ್ಲದ ಪ್ರಚಾರ ಮಾಡಿ ಮಾನ ಹಾನಿ ಮಾಡುತ್ತಿದ್ದಾನೆ ಅಲ್ಲದೆ, ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ದೀಪಿಕಾ ತಾಯಿ ಪದ್ಮಲತಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.