ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಾಮಿಡಿ ಕಿಲಾಡಿಗಳು ಸೀಸನ್ 5 ರ ಪ್ರೋಮೋ ಹರಿಯಬಿಡಲಾಗಿದೆ. ಆದರೆ ಇದನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. ಇದಕ್ಕೆ ಕಾರಣವೂ ಇದೆ.
ಜೀ ಕನ್ನಡದಲ್ಲಿ ಈಗಾಗಲೇ ಯಶಸ್ವಿಯಾಗಿ ನಾಲ್ಕು ಸೀಸನ್ ಗಳನ್ನು ಮುಗಿಸಿರುವ ಕಾಮಿಡಿ ಕಿಲಾಡಿಗಳು ಈಗ ಐದನೇ ಸೀಸನ್ ಗೆ ಕಾಲಿಡುತ್ತಿದೆ. ಇದರ ಎರಡನೇ ಪ್ರೋಮೋವನ್ನು ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.
ಮೊದಲ ಪ್ರೋಮೋ ಬಿಟ್ಟಾಗಲೇ ಈ ಬಾರಿ ನಿರೂಪಕರಾಗಿ ಎಂದಿನಂತೆ ಮಾಸ್ಟರ್ ಆನಂದ್ ಇಲ್ಲ ಎಂದು ಅಭಿಮಾನಿಗಳು ಸಿಟ್ಟಾಗಿದ್ದರು. ಇದೀಗ ಎರಡನೇ ಪ್ರೋಮೋ ನೋಡಿ ಮತ್ತಷ್ಟು ಬೇಸರಗೊಂಡಿದ್ದಾರೆ. ಈ ಬಾರಿ ತೀರ್ಪುಗಾರರಾಗಿ ಎಂದಿನಂತೆ ನವರಸನಾಯಕ ಜಗ್ಗೇಶ್ ಇದ್ದಾರೆ. ಯೋಗರಾಜ್ ಭಟ್ ಕಮ್ ಬ್ಯಾಕ್ ಮಾಡಿದ್ದಾರೆ. ಅವರ ಜೊತೆಗೆ ಅಚ್ಚರಿಯೆಂಬಂತೆ ರಕ್ಷಿತಾ ಸ್ಥಾನದಲ್ಲಿ ಹಿರಿಯ ನಟಿ ತಾರಾ ಅನುರಾಧ ಇದ್ದಾರೆ.
ಮಾಸ್ಟರ್ ಆನಂದ್ ರಂತೆ ರಕ್ಷಿತಾ ಪ್ರೇಮ್ ರನ್ನೂ ಕಾಮಿಡಿ ಕಿಲಾಡಿಗಳು ಪ್ರೇಕ್ಷಕರು ಒಪ್ಪಿಕೊಂಡುಬಿಟ್ಟಿದ್ದರು. ಇದೀಗ ಆನಂದ್ ಇಲ್ಲ, ರಕ್ಷಿತಾ ಕೂಡಾ ಇಲ್ಲ ಎಂದು ನೆಟ್ಟಿಗರು ಗರಂ ಆಗಿ ಕಾಮೆಂಟ್ ಮಾಡಿದ್ದಾರೆ. ತಾರಾ ಅವರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಆದರೆ ನಿರೂಪಕರಾಗಿ ಆನಂದ್, ತೀರ್ಪುಗಾರರಾಗಿ ರಕ್ಷಿತಾ ಇದ್ದರೇನೇ ಶೋಗೊಂದು ಕಳೆ. ಅವರಿಬ್ಬರನ್ನೂ ಯಾಕೆ ಹೊರಗಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.