ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಎಂಎಸ್ ಉಮೇಶ್ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ನೆರವಾಗಿ ಎಂದು ಸಿಎಂ ಸಿದ್ದರಾಮಯ್ಯಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಹಿರಿಯ ನಟ ಉಮೇಶ್ ತಮ್ಮ ಮನೆಯ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಏಟು ಮಾಡಿಕೊಂಡಿದ್ದರು. ಈ ವೇಳೆ ಅವರು ನಡೆದಾಡುವ ಸ್ಥಿತಿಯಲ್ಲೂ ಇರಲಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಈ ಚಿಕಿತ್ಸೆ ವೇಳೆ ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈಗಾಗಲೇ ಇದಕ್ಕೆ ಚಿಕಿತ್ಸೆಯನ್ನೂ ಆರಂಭಿಸಲಾಗಿದೆ. ಆದರೆ ಇದಕ್ಕೆ ಸಾಕಷ್ಟು ಹಣ ವೆಚ್ಚವಾಗುತ್ತಿದೆ. ಇದನ್ನು ಭರಿಸುವ ಶಕ್ತಿ ಅವರಲ್ಲಿಲ್ಲ.
ಹೀಗಾಗಿ ಅವರ ಪರವಾಗಿ ಸಚಿವ ಶಿವರಾಜ್ ತಂಗಡಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.