ಬೆಂಗಳೂರು: ತೆಲುಗು ಧಾರವಾಹಿ ಸೆಟ್ ನಲ್ಲಿ ಕನ್ನಡದ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದ್ದ ವಿಡಿಯೋ ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಚಂದನ್ ನಿನ್ನೆ ಸಂಜೆ ಪತ್ರಿಕಾಗೋಷ್ಠಿ ನಡೆಸಿ ನಿಜ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅಮ್ಮನಿಗೆ ಅನಾರೋಗ್ಯವಿತ್ತು: ಅಮ್ಮನಿಗೆ ಅನಾರೋಗ್ಯವಾಗಿ ಆಸ್ಪತ್ರೆ ಸೇರಿದ್ದರು. ಇದೀಗ ನಿಮ್ಮೆಲ್ಲರ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಪತ್ನಿ ಕವಿತಾ ಅಮ್ಮನನ್ನು ಚೆನ್ನಾಗಿ ನೋಡಿಕೊಂಡಿದ್ದಾಳೆ. ಅದಕ್ಕೆ ಅವಳಿಗೆ ಥ್ಯಾಂಕ್ಸ್ ಹೇಳಬೇಕು.
ಹಲ್ಲೆ ಆಗಿದ್ದು ಯಾಕೆ?: ತೆಲುಗು ಧಾರವಾಹಿ ಶೂಟಿಂಗ್ ಸೆಟ್ ಗೆ ಹೋಗುವ ಮೊದಲು ನಾನು ಆಸ್ಪತ್ರೆ, ಓಡಾಟ ಎಂದು ಸರಿಯಾಗಿ ನಿದ್ರೆ, ವಿಶ್ರಾಂತಿ ಇಲ್ಲದೇ ತಲೆನೋವೇ ಬಂದಿತ್ತು. ಆ ದಿನ ಲಂಚ್ ಬ್ರೇಕ್ ಎಂದು ಕೊಟ್ಟಿದ್ದರು. ಒಟ್ಟು 45 ನಿಮಿಷ ಬ್ರೇಕ್ ಕೊಡುತ್ತಾರೆ. ನಾನು 15 ನಿಮಿಷದಲ್ಲಿ ಊಟ ಮುಗಿಸಿ 10 ನಿಮಿಷ ಮಲಗುತ್ತೀನಿ ಎಂದು ಮಲಗಿದ್ದೆ. ಆದರೆ ಅದಕ್ಕೂ ಮೊದಲು ಮ್ಯಾನೇಜರ್ ಬಂದು ಕರೆದ್ರು. ನಾನು ಆಗ್ತಿಲ್ಲ, 10 ನಿಮಿಷ ರೆಸ್ಟ್ ಮಾಡಿ ಬರ್ತೀನಿ ಎಂದೆ. ಅದಕ್ಕೆ ಆತ ಹೋದ. ನನ್ನ ಪಕ್ಕದಲ್ಲೇ ನನ್ನ ಅಸಿಸ್ಟೆಂಟ್ ಕೂತಿದ್ದ. ಅವನಿಗೆ ತೆಲುಗು ಗೊತ್ತಿತ್ತು. ಹೊರಗೆ ಏನಪ್ಪಾ ಹೀರೋ ಅರ್ಧ ಗಂಟೆ ಎಲ್ಲಾ ನಿದ್ರೆ ಮಾಡ್ತಾರೆ ಎಂದು ಕೇವಲಾಗಿ ಮಾತನಾಡುತ್ತಿದ್ದುದು ನನಗೆ ಕೇಳಿಸುತ್ತಿತ್ತು. ಅಷ್ಟು ಹೊತ್ತಿಗೆ ನಾನು ಎದ್ದು ಕುಳಿತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಕ್ಯಾಮರಾ ಅಸಿಸ್ಟೆಂಟ್ ಹುಡುಗ ಬಂದಿದ್ದ. ಅವನ ಜೊತೆ ನಾನು ತುಂಬಾ ಸಲುಗೆಯಿಂದಿದ್ದೆ. ಆತ ಬಂದು ನನ್ನ ಕರೆದಾಗ ಏ ಇರಪ್ಪಾ ಬರ್ತೀನಿ ಎಂದು ಆತನನ್ನು ಸಲುಗೆಯಿಂದ ತಳ್ಳಿದ್ದೆ ಅಷ್ಟೆ. ಅಷ್ಟಕ್ಕೇ ಆತ ಹೊರಗೆ ಹೋಗಿ ನಾನು ಹೊಡೆದೆ ಎಂದು ಕಣ್ಣೀರು ಹಾಕಿ ನಾಟಕ ಮಾಡಿದ. ಅಲ್ಲಿದ್ದವರೆಲ್ಲಾ ಒಟ್ಟಾಗಿ ನನ್ನ ಮೇಲೆ ತಿರುಗಿಬಿದ್ದರು.
ಪ್ರಿಪ್ಲ್ಯಾನ್ಡ್: ಇದೆಲ್ಲಾ ನೋಡಿದರೆ ನನಗೆ ಎಲ್ಲವೂ ಪೂರ್ವಯೋಜಿತ ಎನಿಸುತ್ತಿದೆ. ಯಾಕೆಂದರೆ ಅಷ್ಟು ಸಣ್ಣ ವಿಚಾರವನ್ನು ಅಷ್ಟು ದೊಡ್ಡ ಮಾಡಿ ನನ್ನ ಮೇಲೆ ಕೈ ಮಾಡಿ, ಎಳೆದಾಡಿದ್ದಾರೆ. ಜೊತೆಗೆ ಅಷ್ಟೊಂದು ಜನ ಸೇರಿದ್ದಾರೆ. ಅವರಲ್ಲಿ ಕೆಲವರು ಹೊರಗಿನಿಂದಲೂ ಬಂದಿದ್ದರು. ನಾನು ಸಂಭಾವನೆ ಪಡೆಯುವುದು ಅವರಿಗೆ ಹೊಟ್ಟೆ ಉರಿ. ಜೊತೆಗೆ ಬೇರೆ ಭಾಷೆಯವನು ಇಲ್ಲಿಗೆ ಬಂದು ನಮ್ಮ ಅವಕಾಶ ಕಿತ್ಕೊಳ್ತಾನೆ ಎಂದು ಹೊಟ್ಟೆ ಕಿಚ್ಚಿರಬೇಕು. ಅದಕ್ಕೇ ಎಲ್ಲರೂ ಸೇರಿ ನನ್ನ ಮೇಲೆ ಹಲ್ಲೆ ಮಾಡಿದರು.
ಧಾರವಾಹಿಯಿಂದ ಹೊರಕ್ಕೆ: ದೈಹಿಕವಾಗಿ ಆಗಿದ್ದು ಸಣ್ಣ ಗಾಯವೇ ಆಗಿರಬಹುದು. ಆದರೆ ಮಾನಸಿಕವಾಗಿ ಅನುಭವಿಸಿದ ನೋವು ದೊಡ್ಡದು. ಇನ್ನು, ಆ ಧಾರವಾಹಿಯಲ್ಲಿ ನಾನು ನಟಿಸಲ್ಲ. ನಿರ್ಮಾಪಕರು ಕನ್ನಡದವರು, ಅವರು ಅಂದು ಒತ್ತಾಯ ಮಾಡಿದ್ದಕ್ಕೆ ಸ್ನೇಹಕ್ಕೆ ಕಟ್ಟು ಬಿದ್ದು ತೆಲುಗಿನಲ್ಲಿ ಅಭಿನಯಿಸಲು ಒಪ್ಪಿದ್ದೆ. ಇನ್ನು, ಅಲ್ಲಿ ಕೆಲಸ ಮಾಡುವ ಮನಸ್ಸಿಲ್ಲ. ತೆಲುಗು ನಟನಿಗೆ ಇಲ್ಲಿ ಹಾಗೆ ಮಾಡಿದ್ದರೆ ಅವರು ಸುಮ್ಮನಿರುತ್ತಿದ್ದರಾ? ಒಬ್ಬ ಕನ್ನಡ ನಟನಿಗೆ ಆದ ಅವಮಾನ ಇದು.