ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ಬಾರಿ ಹ್ಯಾಪೀ ಬಿಗ್ ಬಾಸ್ ಎನ್ನುವ ಪರಿಕಲ್ಪನೆಯೊಂದಿಗೆ ಶೋ ಆರಂಭಿಸಲಾಗಿತ್ತು.
ಆದರೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ನಿಂದನೆ, ಹಿಂಸಾತ್ಮಕ ಪ್ರವೃತ್ತಿ ಕಂಡುಬರುತ್ತಿದೆ. ಈ ವಾರ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ಕಣ್ಣಿಗೆ ರಾಸಾಯನಿಕ ದ್ರಾವಣ ತಗುಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಚಿಕಿತ್ಸೆ ಬಳಿಕ ಇಬ್ಬರೂ ಮನೆಗೆ ಮರಳಿದ್ದಾರೆ.
ಆದರೆ ಇಬ್ಬರಿಗೂ ಕಣ್ಣಿಗೆ ಕಪ್ಪು ಕನ್ನಡಕ ಹಾಕಲಾಗಿತ್ತು. ಕಣ್ಣಿನ ಆರೋಗ್ಯಕ್ಕೆ ಹಾನಿಯಾಗಿದೆ. ಇದೇ ವಿಚಾರ ಈಗ ಸಂಗೀತಾ ಶೃಂಗೇರಿ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸಂಗೀತಾ ಸಹೋದರ ಸಂತೋಷ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮತ್ತು ಕಲರ್ಸ್ ಕನ್ನಡ ವಾಹಿನಿಗೆ ಪ್ರಶ್ನೆ ಮಾಡಿದ್ದಾರೆ.
ಕಿಚ್ಚ ಸುದೀಪ್ ನೀವು ಬಿಗ್ ಬಾಸ್ ಮನೆ ಸುರಕ್ಷಿತೆಯ ತಾಣ, ಯಾವುದೇ ತಪ್ಪುಗಳಾಗಲ್ಲ ಎಂದು ಭರವಸೆ ನೀಡಿದ್ದಿರಿ. ಆದರೆ ಈಗಿನ ವಿದ್ಯಮಾನ ಗಮನಿಸಿದರೆ ಅದೆಲ್ಲವನ್ನೂ ನಂಬಲು ಸಾಧ‍್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಫ್ಯಾಮಿಲಿ ಶೋ ಆಗಿದ್ದ ಇದು ಈಗ ಅತಿಯಾದ ಹಿಂಸೆ, ಆಕ್ರಮಣಕಾರೀ ವರ್ತನೆಯ ವೇದಿಕೆಯಾಗುತ್ತಿರುವುದು ನೋಡಲು ಬೇಸರವಾಗುತ್ತಿದೆ. ತೆರೆ ಮೇಲೆ ಇಂತಹ ಆಕ್ರಮಣಕಾರೀ ವರ್ತನೆಯನ್ನು ನಾವು ಕುಟುಂಬಸ್ಥರು ಹೇಗೆ ತಾಳ್ಮೆಯಿಂದ ನೋಡಿಕೊಂಡು ಕೂರಲು ಸಾಧ್ಯ?
ಕಲರ್ಸ್ ಕನ್ನಡ ವಾಹಿನಿಯವರೇ, ಈ ವಿಚಾರವನ್ನು ಬಗೆಹರಿಸಲು ಕಿಚ್ಚ ಸುದೀಪ್ ಅವರೇ ಬರಬೇಕು ಎಂದು ಯಾಕೆ ಕಾಯುತ್ತಿದ್ದೀರಿ? ಸ್ವತಃ ಬಿಗ್ ಬಾಸ್ ತಪ್ಪು ಯಾರದ್ದು ಎಂದು ತಿದ್ದಿ ಹೇಳಲು ಸಾಧ‍್ಯವಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.