ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹಿರಿಯ ನಟಿ ಲೀಲಾವತಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಗಳಿಂದಾಗಿ ಲೀಲಾವತಿ ಹಾಸಿಗೆ ಹಿಡಿದಿದ್ದರು. ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಅಮ್ಮನ ಸಾವಿನ ವಿಚಾರ ತಿಳಿಯುತ್ತಿದ್ದಂತೇ ಪುತ್ರ ವಿನೋದ್ ರಾಜ್ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ನಟ ಶಿವರಾಜ್ ಕುಮಾರ್ ಈಗಾಗಲೇ ಆಸ್ಪತ್ರೆಗೆ ಬಂದು ಲೀಲಾವತಿಯವರ ಅಂತಿಮ ದರ್ಶನ ಪಡೆದರು. ಮೊದಲು ಮೃತದೇಹವನ್ನು ಮೈಲನಹಳ್ಳಿಯ ಮನೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಕೆಲವು ಸಮಯ ಇಟ್ಟು ಬಳಿಕ ನೆಲಮಂಗಲ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಕರೆತಂದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ನಾಳೆ ಮಧ‍್ಯಾಹ್ನದವರೆಗೆ ಲೀಲಾವತಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆಯಿರಲಿದೆ. ಅದಾದ ಬಳಿಕ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿಯೇ ಲೀಲಾವತಿಯವರ ಅಂತಿಮ ಸಂಸ್ಕಾರ ನಡೆಯಲಿದೆ. ಈಗಾಗಲೇ ಪೊಲೀಸರು ಅಂತಿಮ ದರ್ಶನಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು, ಸ್ಯಾಂಡಲ್ ವುಡ್ ಕಲಾವಿದರು ಅಂತಿಮ ದರ್ಶನಕ್ಕೆ ಬರಲಿದ್ದಾರೆ.