ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮತ್ತೆ ಮೋಡಿ ಮಾಡಿದೆ. ಭಾರತದ ಜೋಡಿಯು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಕಂಚಿನ ಪದಕ ಗೆದ್ದಿದೆ.
ಸಾತ್ವಿಕ್–ಚಿರಾಗ್ ಜೋಡಿಯು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ದಾಪುಗಾಲಿಡುವ ಮೂಲಕ ಪದಕ ಖಚಿತಪಡಿಸಿಕೊಂಡಿತ್ತು. ಭಾರತದ ಆಟಗಾರರು ನೇರ ಗೇಮ್‌ಗಳಿಂದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತರಾದ ಆರನ್ ಚಿಯಾ ಮತ್ತು ಸೊ ವೂಡಿ ಯಿಕ್ ಅವರಿಗೆ ಆಘಾತ ನೀಡಿದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಸಾತ್ವಿಕ್– ಚಿರಾಗ್ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿ 21–12, 21–19 ರಿಂದ ಮಲೇಷ್ಯಾದ ಆಟಗಾರರನ್ನು ಸೋಲಿಸಿತು. ಆ ಮೂಲಕ ವರ್ಷದ ಹಿಂದೆ ಇದೇ ನಗರದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿಯಾ ಮತ್ತು ಸೊ ಕೈಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.
ಇಂದು ಬೆಳಿಗ್ಗೆ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಜೋಡಿಯು 19–21, 21–18, 12–21ರಿಂದ 11ನೇ ಶ್ರೇಯಾಂಕ ಪಡೆದಿರುವ ಚೀನಾದ ಚೆನ್ ಬೊ ಯಂಗ್– ಲಿಯು ಯಿ ಜೋಡಿ ವಿರುದ್ಧ ಮುಗ್ಗರಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಇದು ಸಾತ್ವಿಕ್–ಚಿರಾಗ್ ಜೋಡಿಗೆ ಎರಡನೇ ಪದಕವಾಗಲಿದೆ. ಕೂಟದಲ್ಲಿ ಭಾರತಕ್ಕೆ ದಕ್ಕಿದ ಏಕೈಕ ಪದಕ ಇದಾಗಿದೆ.
2022ರಲ್ಲಿ ಸಾತ್ವಿಕ್–ಚಿರಾಗ್ ಜೋಡಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 2011 ರಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಗೆದ್ದ ನಂತರ ಭಾರತ ಪ್ರತಿಯೊಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುತ್ತಾ ಬಂದಿದೆ.