ಪ್ಯಾರಿಸ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿರುವ ಭಾರತದ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಈ ವರ್ಷದ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರು ಶುಕ್ರವಾರ ತಡರಾತ್ರಿ ನಡೆದ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಈಟಿಯನ್ನು 88.16 ಮೀಟರ್ ದೂರಕ್ಕೆ ಎಸೆದು ಚಿನ್ನ ಗೆದ್ದರು. ಈ ಮೂಲಕ ಸತತ ಎರಡು ವರ್ಷಗಳ ಬಳಿಕ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಸಾಧನೆ ಮಾಡಿದರು.
ಜರ್ಮನಿಯ ಅನುಭವಿ ಜೂಲಿಯನ್ ವೆಬರ್ (87.88 ಮೀಟರ್) ಹಾಗೂ ಬ್ರೆಜಿಲ್‌ನ ಲೂಯಿಸ್ ಮಾರಿಸಿಯೊ ಡ ಸಿಲ್ವ (86.62 ಮೀಟರ್) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.
ಚೋಪ್ರಾ ಮೇ 16ರಂದು ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಮೊದಲ ಬಾರಿ 90 ಮೀಟರ್‌ಗಿಂತ (90.23 ಮೀ.) ದೂರ ಎಸೆದು ತಮ್ಮ ದೀರ್ಘಕಾಲದ ಗುರಿಯನ್ನು ಈಡೇರಿಸಿಕೊಂಡಿದ್ದರು. ಆದರೆ, ವೆಬರ್ 91.06 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತದ ಎದುರಾಳಿಯನ್ನು ಹಿಂದೆ ಹಾಕಿದ್ದರು.