Publish Date: Thu, 17 Feb 2022 (09:35 IST)
Updated Date: Thu, 17 Feb 2022 (09:39 IST)
ಪ್ರಮುಖ ಉದ್ಯಮಿ ಹಾಗೂ ಟಾಟಾ ಟ್ರಸ್ಟ್ನ ಅಧ್ಯಕ್ಷರಾದ ರತನ್ ಟಾಟಾ ಅವರಿಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುಧವಾರ ಪ್ರದಾನ ಮಾಡಲಾಯಿತು.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಅಸ್ಸಾಂ ಬೈಭವ್” ನೀಡಿದರು. ಮುಂಬೈನ ಕೊಲಾಬದಲ್ಲಿ ಈ ಕಾರ್ಯಕ್ರಮ ನಡೆಯಿತು. ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ ರತನ್ ಟಾಟಾ ಅವರಿಗೆ ಈ ಗೌರವ ನೀಡಲಾಯಿತು.
ಪ್ರಶಸ್ತಿಯು ಫಲಕ, ನಗದು ಮೊತ್ತವಾದ 5 ಲಕ್ಷ ರೂಪಾಯಿ ಹಾಗೂ ಪದಕವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಜನವರಿ 24ರಂದು ಸಮಾರಂಭವೊಂದರಲ್ಲಿ ನೀಡಬೇಕಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಗಾಗಿ ರತನ್ ಟಾಟಾ ಅವರಿಗೆ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
“ಉದ್ಯಮಿಯಾಗಿ ಹಾಗೂ ದಾನಿಯಾಗಿ ರತನ್ ಟಾಟಾ ಅವರು ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ,” ಎಂದು ಶರ್ಮಾ ಹೇಳಿದ್ದಾರೆ.
ಜನವರಿ 24ನೇ ತಾರೀಕಿನಂದೇ ಅಸ್ಸಾಂ ರಾಜ್ಯಪಾಲರು ರಾಜ್ಯದ ಇತರ ಎರಡು ನಾಗರಿಕ ಪ್ರಶಸ್ತಿಗಳಾದ “ಅಸ್ಸಾಂ ಸೌರವ್” ಮತ್ತು “ಅಸ್ಸಾಂ ಗೌರವ್” ಅನ್ನು ವಿವಿಧ ಕ್ಷೇತ್ರದ 18 ಮಂದಿಗೆ ವಿತರಣೆ ಮಾಡಿದ್ದರು.