ಗಾಝಿಯಾಬಾದ್: ಅಮ್ಮನ ಜೊತೆ ಸೇರಿಕೊಂಡು ಅತ್ತೆಯನ್ನು ಮೆಟ್ಟಿಲುಗಳ ಮೇಲೆ ದರ ದರನೆ ಹಿಡಿದೆಳೆದು ಸೊಸೆ ಹಲ್ಲೆ ನಡೆಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಝಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೊಸೆಯ ಕೃತ್ಯ ದಾಖಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೇ ಪೊಲೀಸರು ಸೊಸೆ, ಆಕೆಯ ತಾಯಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿ ಸುದೇಶ್ ದೇವಿ ಹಲ್ಲೆಗೊಳಗಾದ ಅತ್ತೆ.
ಸೊಸೆ ಆಕಾಂಕ್ಷ ಅತ್ತೆಯ ಜೊತೆ ವಾಗ್ವಾದ ನಡೆಸುತ್ತಾಳೆ. ಬಳಿಕ ಹಲ್ಲೆ ನಡೆಸುತ್ತಾಳೆ. ಬಳಿಕ ಮೆಟ್ಟಿಲುಗಳ ಮೇಲೆ ಅತ್ತೆಯನ್ನು ನೂಕಿ ದರ ದರನೆ ಎಳೆದುಕೊಂಡು ಹೋಗುತ್ತಾಳೆ. ಅತ್ತೆ ಅಂಗಲಾಚಿದರೂ ಬಿಡದೇ ಹಲ್ಲೆ ನಡೆಸುತ್ತಾಳೆ. ಈ ವೇಳೆ ಆಕೆಯ ಅಮ್ಮನೂ ಸಾಥ್ ನೀಡುತ್ತಾಳೆ.
ಸೊಸೆಯ ಕೃತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.