ವಡೋದರಾ: ತನ್ನದೇ ಕಾರು ಆಕ್ಸಿಡೆಂಟ್ ಮಾಡಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದರೂ ಸ್ವಲ್ಪವೂ ಪಶ್ಚಾತ್ತಾಪವಿಲ್ಲದೇ ಓರ್ವ ಯುವಕ ರಸ್ತೆಯಲ್ಲೇ ಪುಂಡಾಟ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಡೋದರಾದಲ್ಲಿ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಡಿದ ಮತ್ತಿನಲ್ಲಿದ್ದ ಯುವಕ ಮೊದಲು ಕಾರಿನಿಂದಲೂ ಇಳಿದಿರುವುದಿಲ್ಲ. ಜೊತೆಗಿದ್ದ ಯುವಕ ಕಾರಿನಿಂದ ಇಳಿದು ದೂರ ಹೋಗುತ್ತಾನೆ. ಬಳಿಕ ತಾನೂ ಕಾರಿನಿಂದ ಇಳಿದು ತನ್ನಿಂದ ಅಪಘಾತವಾದ ಮಹಿಳೆ ಕಡೆಗೆ ತಿರುಗಿಯೂ ನೋಡದೇ ತನ್ನ ಪಾಡಿಗೆ ತಾನು ಇನ್ನೊಂದು ರೌಂಡ್ ಎಂದು ದರ್ಪ ತೋರುತ್ತಾ ರಸ್ತೆಯಲ್ಲೇ ತೂರಾಡುತ್ತಾನೆ.
ಕುಡಿದ ಮತ್ತಿನಲ್ಲಿರುವ ಯುವಕನಿಗೆ ತಾನೇನು ಮಾಡುತ್ತಿದ್ದೇನೆ ಎನ್ನುವ ಪರಿವೆಯೂ ಇರುವುದಿಲ್ಲ. ಅಷ್ಟರಲ್ಲಿ ಅಲ್ಲಿ ಸೇರುವ ಜನ ಆತನನ್ನು ಸುತ್ತುವರಿದು ಹಿಡಿದುಕೊಳ್ಳುತ್ತಾರೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ. ಆರೋಪಿ ಯುವಕ ಕಾನೂನು ವಿದ್ಯಾರ್ಥಿಯಾಗಿದ್ದು ರಕ್ಷಿತ್ ಎಂದು ಗುರುತಿಸಲಾಗಿದೆ.