ಬೆಂಗಳೂರು: ಕೈಮುಟ್ಟಿ ಅನುಚಿತ ವರ್ತನೆ ತೋರಿದ ಅಭಿಮಾನಿಯೊಬ್ಬನಿಗೆ ಕನ್ನಡದ ನಟಿ ರಾಗಿಣಿ ದ್ವಿವೇದಿ ಕಪಾಳಮೋಕ್ಷ ಮಾಡಿರುವ ಘಟನೆ ಈಚೆಗೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ರಾಗಿಣಿ ದ್ವಿವೇದಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನಟಿ ರಾಗಿಣಿ ಕೂಡ ಎಲ್ಲರ ಜತೆ ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ನಟಿ ರಾಗಿಣಿ ಕೈಮುಟ್ಟಿ ಅನುಚಿತ ವರ್ತನೆ ತೋರಿದ್ದಾನೆ. ಇದರಿಂದ ಕೋಪಗೊಂಡ ನಟಿ ರಾಗಿಣಿ ಆತನ ಕಪಾಳಕ್ಕೆ ಭಾರಿಸಿದ್ದಾರೆ.
ಈ ಕುರಿತ ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ವೈರಲ್ ಆಗಿತ್ತಾದರೂ ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೆ ಕಪಾಳ ಮೋಕ್ಷದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆಗಿದ್ದೇನು: ಎಂಜಿ ರೋಡ್‌ನಲ್ಲಿರುವ ಪಬ್‌ವೊಂದಕ್ಕೆ ನಟಿ ರಾಗಿಣಿ ಪಿಂಕ್ ಬಣ್ಣದ ಫ್ರಾಕ್ ಹಾಕಿ ಎಂಟ್ರಿಕೊಟ್ಟಿದ್ದರು. ಈ ವೇಳೆ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ರಾಗಿಣಿ ದ್ವಿವೇದಿ ಅವರು ಫ್ಯಾನ್ಸ್‌ಗೆ ಫೋಟೋ ನೀಡುತ್ತಿದ್ದ ವೇಳೆ ಅಲ್ಲೇ ಇದ್ದ ಅಭಿಮಾನಿಯೊಬ್ಬ ಅವರ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.