ಚೆನ್ನೈ: ಕೆಲವು ಸಮಯದ ಹಿಂದೆ ಡಿಎಂಕೆ ನಾಯಕ ಉದಯನಿಧಿ ಮಾರನ್ ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿ ಟೀಕೆಗೊಳಗಾಗಿದ್ದರು. ಇದೀಗ ಅವರದೇ ಪಕ್ಷದ ಸಚಿವ ಕೆ ಪೊನ್ಮುಡಿ ಹಿಂದೂಗಳ ಪವಿತ್ರ ತಿಲಕವನ್ನು ಲೈಂಗಿಕ ಭಂಗಿಗೆ ಹೋಲಿಸಿ ಭಾರೀ ಆಕ್ರೋಶಕ್ಕೊಳಗಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಕೆ ಪೊನ್ಮುಡಿ ಈ ವಿವಾದ ಮಾಡಿಕೊಂಡಿದ್ದಾರೆ. ಶೈವ ಮತ್ತು ವೈಷ್ಣವ ಪಂತಗಳು ಹಾಗೂ ಅವುಗಳ ಧಾರ್ಮಿಕ ಗುರುತನ್ನು ಲೈಂಗಿಕ ಭಂಗಿಗಳಿಗೆ ಹೋಲಿಸಿ ಪೊನ್ನುಡಿ ವಿವಾದಕ್ಕೀಡಾಗಿದ್ದಾರೆ.
ಅವರ ಹೇಳಿಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಧಾರ್ಮಿಕ ನಂಬಿಕೆ ಮೇಲೆ ಡಿಎಂಕೆ ಮತ್ತು ಇಂಡಿಯಾ ಒಕ್ಕೂಟದ ನಾಯಕರಿಗೆ ಎಂಥಾ ಭಾವನೆಯಿದೆ ಎಂಬುದು ಪೊನ್ಮುಡಿ ಹೇಳಿಕೆಯಿಂದಲೇ ಬಯಲಾಗುತ್ತದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಸ್ವತಃ ಡಿಎಂಕೆ ಸಂಸದೆ ಕನಿಮೊಳಿ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಸ್ವಪಕ್ಷೀಯರಿಂದಲೇ ಆಕ್ಷೇಪಕ್ಕೊಳಗಾಗಿದ್ದ ಕೆ ಪೊನ್ಮುಡಿಯನ್ನು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆ. ಪೊನ್ಮುಡಿ ಹೇಳಿಕೆ ಡಿಎಂಕೆಗೆ ಹಾನಿ ಮಾಡಿದೆ. ಹೀಗಾಗಿ ಅವರನ್ನು ವಜಾ ಮಾಡಿ ಆದೇಶ ಹೊರಡಿಸಲಾಗಿದೆ.