ನವದೆಹಲಿ: 2008 ರ ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ತಹವ್ವೂರ್ ರಾಣಾನನ್ನು ಈಗ ಎನ್ಐಎ ತೀವ್ರ ವಿಚಾರಣೆ ನಡೆಸುತ್ತಿದೆ. ಈತನನ್ನು ಇರಿಸಿರುವ ಬಂಧನದ ಕೊಠಡಿಗೆ ಕೇವಲ 12 ಜನರಿಗೆ ಮಾತ್ರ ಭೇಟಿಗೆ ಅವಕಾಶವಿದೆ. ಹೇಗಿದೆ ಆತನ ಕೊಠಡಿ ಇಲ್ಲಿದೆ ವಿವರ.
ಅಮೆರಿಕಾದಿಂದ ಗಡೀಪಾರಾದ ಉಗ್ರ ರಾಣಾನನ್ನು ಎನ್ಐಎ ಅಧಿಕಾರಿಗಳು ಮೊನ್ನೆಯಷ್ಟೇ ಭಾರತಕ್ಕೆ ಕರೆತಂದು ಕೋರ್ಟ್ ಗೆ ಹಾಜರುಪಡಿಸಿದ್ದರು. ಇದೀಗ ಎನ್ ಐಎ ಕಸ್ಟಡಿಯಲ್ಲಿರುವ ಆತನನ್ನು ಮುಂಬೈ ದಾಳಿ ಕುರಿತಾಗಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಈತನನ್ನು ಭದ್ರತಾ ಕಾರಣಗಳಿಂದ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ನಲ್ಲಿರಿಸಲಾಗಿದೆ. ಎನ್ಐಎ ಕಚೇರಿ ಈಗ ಜೈಲಿನಂತಾಗಿದೆ. ಈತನನ್ನು 14*14 ಅಳತೆಯ ಕೊಠಡಿಯಲ್ಲಿರಿಸಲಾಗಿದೆ. ಇಲ್ಲಿಗೆ ಸಿಸಿಟಿವಿ ಕಣ್ಗಾವಲು ಇದ್ದು, ಆತನ ಎಲ್ಲಾ ಚಲನವಲನಗಳನ್ನು ಪ್ರತೀಕ್ಷಣವೂ ಗಮನಿಸಲಾಗುತ್ತಿದೆ.
ಆತನನ್ನು ಇರಿಸಿರುವ ಎನ್ಐಎ ಕಚೇರಿಯ ಹೊರಭಾಗದಲ್ಲಿ ದೆಹಲಿ ಪೊಲೀಸರು, ಅರೆಸೈನಿಕ ಪಡೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ನೆಲದ ಮೇಲೆಯೇ ಹಾಸಿಗೆ ಹಾಕಿಕೊಡಲಾಗಿದೆ. ಅಲ್ಲಿಯೇ ಊಟ, ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಈತನನ್ನು ಭೇಟಿ ಮಾಡಲು ಕೇವಲ 12 ಜನ ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಆತನಿಗೆ ಹೊರಜಗತ್ತಿನ ಸಂಪರ್ಕವೇ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.