ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆಗೆ ಶಿವಸೇನಾ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸಿದ್ದಾರೆ.
ಸೈಫ್ ಅಲಿ ಖಾನ್ ಒಬ್ಬ ನಟ, ಪದ್ಮಶ್ರೀ ಪುರಸ್ಕೃತ. ಅವರು ಮತ್ತು ಅವರ ಕುಟುಂಬದವರು ಇತ್ತೀಚೆಗಷ್ಟೇ ಮೋದಿಯವರನ್ನು ಭೇಟಿ ಮಾಡಿದ್ದರು. ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿಯಾದಾಗ ಮೋದಿ ಮುಂಬೈನಲ್ಲೇ ಇದ್ದರು. ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಂಬೈ ಮತ್ತು ರಾಜ್ಯದಲ್ಲಿ ಏನಾಗುತ್ತಿದೆ? ಸಾಮಾನ್ಯ ಜನರೂ ಸುರಕ್ಷಿತವಾಗಿಲ್ಲ. ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುತ್ತದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರ ಬಳಿ ಪತ್ರಕರ್ತರು ಸೈಫ್ ಮೇಲಿನ ದಾಳಿ ಬಗ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಅವರು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸಿದ್ದಾರೆ. ಮೋದಿ ವೈಫಲ್ಯವೇ ಇದಕ್ಕೆ ಕಾರಣ ಎಂದಿದ್ದಾರೆ.
ಇನ್ನು, ಇದಕ್ಕೆಲ್ಲಾ ಉತ್ತರ ನೀಡಬೇಕಾದ ಮುಖ್ಯಮಂತ್ರಿ, ಗೃಹಮಂತ್ರಿಗಳು ಎಲ್ಲಿದ್ದಾರೆ? ವಿಐಪಿಗಳಿಗೇ ಇಂತಹ ಪರಿಸ್ಥಿತಿಯಾದರೆ ಸಾಮಾನ್ಯ ಜನರು ಇಲ್ಲಿ ಸುರಕ್ಷಿತವೇ ಎಂದು ಸಂಜಯ್ ರಾವತ್ ಪ್ರಶ್ನೆ ಮಾಡಿದ್ದಾರೆ.