ಪಶ್ಚಿಮ ಬಂಗಾಳ: ನೃತ್ಯಪಟುಗಳಾದ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್ ಅವರು ಪಶ್ಚಿಮ ಬಂಗಾಳದ ಕುಲ್ತಾಲಿ ಬ್ಲಾಕ್‌ನ ಜಲಬೇರಿಯಾದಲ್ಲಿರುವ ಪಲೇರ್ ಚಕ್ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲೇ ಮಂಗಳವಾರ ಸಲಿಂಗ ವಿವಾಹವಾಗಿದ್ದಾರೆ.
ಸಲಿಂಗ ವಿವಾಹಕ್ಕೆ ಭಾರತ ದೇಶದ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕಾನೂನಿನಲ್ಲಿ ಮಾನ್ಯತೆ ಇಲ್ಲದಿದ್ದರೂ ಇಬ್ಬರು ಯುವತಿಯರು ಹಸೆಮಣೆಯೇರಿದ್ದಾರೆ.
ರಿಯಾ ಮತ್ತು ರಾಖಿ ಅವರು ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯವಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೇಮಾಂಕುರವಾಗಿತ್ತು. ಗ್ರಾಮಸ್ಥರ ಬೆಂಬಲದೊಂದಿಗೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ನವೆಂಬರ್ 4ರಂದು ದೇವಸ್ಥಾನದಲ್ಲಿ ಮದುವೆ ಸಮಾರಂಭ ನಡೆದಿದೆ. ವಧುವಿನಂತೆ ಅಲಂಕಾರಗೊಂಡ ರಿಯಾ, ವರನಂತೆ ತಯಾರಾದ ರಾಖಿ ಪರಸ್ಪರ ಹೂ ಮಾಲೆ ಬದಲಾಯಿಸಿಕೊಂಡಿದ್ದಾರೆ. ರಿಯಾ ಅವರು ಮಂದಿರಬಜಾರ್‌ನ ರಾಮೇಶ್ವರಪುರದ ನಿವಾಸಿಯಾಗಿದ್ದಾರೆ.
ನಾವು ಪ್ರಾಪ್ತ ವಯಸ್ಸಿಗೆ ಬಂದಿದ್ದೇವೆ. ನಮ್ಮ ಜೀವನವನ್ನು ನಾವೇ ನಿರ್ಧರಿಸಬಹುದಾಗಿದೆ. ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಲಿಂಗ ಏಕೆ ಮುಖ್ಯ ಎಂದು ಬಕುಲ್ತಲಾ ನಿವಾಸಿ ರಾಖಿ ಪ್ರಶ್ನಿಸಿದ್ದಾರೆ. ನನ್ನ ಕುಟುಂಬದ ವಿರೋಧದ ನಡುವೆಯೂ ರಿಯಾಳನ್ನು ಮದುವೆಯಾಗಲು ನಾನು ನಿರ್ಧರಿಸಿದ್ದೆ ಎಂದೂ ಅವರು ತಿಳಿಸಿದ್ದಾರೆ.