ವಾರಣಾಸಿ: ಎರ್ನಾಕುಲಂ- ಬೆಂಗಳೂರು ಸೇರಿದಂತೆ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಇಂದು ಹಸಿರು ನಿಶಾನೆ ತೋರಿಸಿದ್ದಾರೆ.
ಬನಾರಸ್‌ನಿಂದ ಖಜುರಾಹೊ, ಲಕ್ನೋದಿಂದ ಸಹಾರನ್‌ಪುರ, ಫಿರೋಜ್‌ಪುರದಿಂದ ದೆಹಲಿ ಮತ್ತು ಎರ್ನಾಕುಲಂನಿಂದ ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಭಾರತದಲ್ಲಿ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ವಿಭಾಗಕ್ಕೆ ಇದೀಗ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರ್ಪಡೆಯಾಗಿದೆ.
ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಸೇವೆಯು ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ದಕ್ಷಿಣ ರೈಲ್ವೆಯ ಮೊದಲ ಅಂತರರಾಜ್ಯ ಅರೆಹೈ ಸ್ಪೀಡ್ ಪ್ರೀಮಿಯಂ ಸೇವೆಯಾಗಿದೆ.
ಈ ರೈಲು ಕೇರಳ ಮತ್ತು ತಮಿಳುನಾಡಿನಾದ್ಯಂತದ ಪ್ರಮುಖ ನಗರಗಳಾದ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್ ಮತ್ತು ಸೇಲಂ ಮೂಲಕ ಹಾದುಹೋಗುತ್ತದೆ, ನಂತರ ಕೃಷ್ಣರಾಜಪುರಂ ಮತ್ತು ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ಚೇರ್ ಕಾರ್ ಸೀಟುಗಳ ಬೆಲೆ ₹1,095 ಆಗಿದ್ದರೆ, ಎಕ್ಸಿಕ್ಯೂಟಿವ್ ಕ್ಲಾಸ್ ಸೀಟುಗಳ ಬೆಲೆ ₹2,289 ಮೂರು ರಾಜ್ಯಗಳ ನಡುವಿನ ಹೊಸ ಸಂಪರ್ಕವು ವ್ಯವಹಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
ಎರ್ನಾಕುಲಂನಿಂದ ಬೆಂಗಳೂರಿಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಎರಡು ಗಂಟೆ ಸಮಯವನ್ನು ಉಳಿತಾಯ ಮಾಡುತ್ತದೆ. ಇದು ಎಂಟು ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗವು ಕೇರಳ, ತಮಿಳುನಾಡು, ಕರ್ನಾಟಕ ನಡುವೆ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.