ನವದೆಹಲಿ: ದೇಶದಾದ್ಯಂತ ಶಾಲೆ, ಬಸ್, ರೈಲು ನಿಲ್ದಾಣಗಳಿಂದ ಬೀದಿನಾಯಿಗಳನ್ನು ಎತ್ತಂಗಡಿ ಮಾಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಶ್ವಾನ ಪ್ರಿಯರು ಸಿಡಿದೆದ್ದಿದ್ದಾರೆ. ನಮಗೂ ಸ್ವಾತಂತ್ರ್ಯ ಬೇಕು ಎಂದು ನಾಯಿಗಳ ಫೋಟೋ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ.
ದೇಶದಲ್ಲಿ ಬೀದಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಬೀಡಾಡಿ ನಾಯಿಗಳ ಎತ್ತಂಗಡಿಗೆ ಖಡಕ್ ಸೂಚನೆ ನೀಡಿದೆ. ಸಾಂಸ್ಥಿಕ ಪ್ರದೇಶಗಳಲ್ಲಿನ ಬೀದಿ ನಾಯಿಗಳನ್ನು ತಕ್ಷಣವೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಕಂಡುಬರುವ ಬೀಡಾಡಿ ರಾಸುಗಳನ್ನೂ ಸ್ಥಳಾಂತರಿಸಬೇಕು. ಒಂದು ಸ್ಥಳದಲ್ಲಿ ಹಿಡಿದು ತಂದ ಶ್ವಾನಗಳನ್ನು ಮತ್ತೆ ಅದೇ ಸ್ಥಳದಲ್ಲಿ ಬಿಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಇದರ ವಿರುದ್ಧ ಶ್ವಾನ ಪ್ರಿಯರು ಸಿಡಿದೆದ್ದಿದ್ದಾರೆ. ನಾಯಿಗಳಿಗೂ ಈ ಭೂಮಿ ಸೇರಿದೆ. ಇಲ್ಲಿ ಬದುಕುವ ಹಕ್ಕಿದೆ. ದೇಶಕ್ಕೇ ಸ್ವಾತಂತ್ರ್ಯ ಬಂದು 78 ವರ್ಷವಾಗಿದೆ. ಆದರೆ ಕೆಲವರಿಗೆ ಇನ್ನೂ ಬಂದಿಲ್ಲ ಎಂದು ಬೀದಿ ನಾಯಿಗಳ ಪರ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಮಾತನಾಡಲು ಆಗದ ಮೂಕ ಪ್ರಾಣಿಗಳ ಪರ ನಾವು ನಿಲ್ಲಬೇಕಿದೆ. ಈ ಪರಿಶುದ್ಧ ಆತ್ಮಗಳಿಗೆ ಬೀದಿಯೇ ಮನೆ. ಅದನ್ನೂ ಕಿತ್ತುಕೊಳ್ಳಬೇಡಿ. ನಮ್ಮ ಹಾಗೇ ಉಸಿರಾಡುವ, ಓಡಾಡುವ, ಬದುಕುವ ಹಕ್ಕು ಅವುಗಳಿಗೂ ಇದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.