ನವದೆಹಲಿ: ಬೀದಿನಾಯಿಗಳನ್ನು ಎತ್ತಂಗಡಿ ಮಾಡಿ ಆಶ್ರಯ ಕೇಂದ್ರಕ್ಕೆ ಹಾಕಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ಆಕ್ಷೇಪವೆತ್ತಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಒಮ್ಮೆ ರಾತ್ರಿ ಗಲ್ಲಿ ಏರಿಯಾಗೆ ಹೋಗಿ ನೋಡಿ ಎಂದು ಜನ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದ ಜನ ನಿರ್ಭೀತಿಯಿಂದ ಓಡಾಡಲು ಕಷ್ಟವಾಗುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಎಲ್ಲಾ ಬೀದಿನಾಯಿಗಳನ್ನು ಶ್ವಾನ ಕೇಂದ್ರಗಳಿಗೆ ರವಾನಿಸುವಂತೆ ಆದೇಶ ನೀಡಿದೆ.
ಆದರೆ ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಆಕ್ಷೇಪವೆತ್ತಿದ್ದಾರೆ. ಈ ಮೂಕಪ್ರಾಣಿಗಳು ಸಮಸ್ಯೆಯಲ್ಲ. ಅವುಗಳಿಗೆ ವ್ಯಾಕ್ಸಿನೇಷನ್, ವಾಸಸ್ಥಳ ಮಾಡಿಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಬೀದಿನಾಯಿಗಳನ್ನು ಕರುಣೆಯಿಂದ ನೋಡಬೇಕು ಎಂದು ಟ್ವೀಟ್ ಮಾಡಿದ್ದರು.
ಆದರೆ ರಾಹುಲ್ ಗಾಂಧಿ ಟ್ವೀಟ್ ಗೆ ಅನೇಕರು ಪ್ರತಿಕ್ರಿಯಿಸಿದ್ದು, ಮೊದಲು ನಿಮ್ಮ ಭದ್ರತೆ ಎಲ್ಲಾ ಬಿಟ್ಟು ರಾತ್ರಿ ಗಲ್ಲಿ ಏರಿಯಾಗಳಲ್ಲಿ ತಿರುಗಾಡಿ ನೋಡಿ. ಆಗ ಗೊತ್ತಾಗುತ್ತದೆ ಬೀದಿ ನಾಯಿಗಳಿಂದ ಎಷ್ಟು ತೊಂದರೆಯಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಆ ಬೀದಿ ನಾಯಿಗಳಲ್ಲಿ ಕೆಲವನ್ನಾದರೂ ನೀವು ದತ್ತು ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.