ನವದೆಹಲಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮತಗಳ್ಳತನ ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಮಿಂತಾ ದೇವಿ ಟಿ ಶರ್ಟ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಅವರು ಸಿಟ್ಟಾಗಿದ್ದು ನನ್ನ ಫೋಟೋ ಹಾಕಲು ರಾಹುಲ್ ಗಾಂಧಿಗೆ ಅಧಿಕಾರ ಕೊಟ್ಟವರು ಯಾರು ಎಂದಿದ್ದಾರೆ.
ಬಿಹಾರದಲ್ಲಿ ಮತ ಪಟ್ಟಿ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮಿಂತಾ ದೇವಿ ಫೋಟೋ ಇರುವ ಟಿ ಶರ್ಟ್ ಧರಿಸಿದ್ದಾರೆ. ಬಿಹಾರದ ಪರಿಷ್ಕೃತ ಮತಪಟ್ಟಿಯಲ್ಲಿ 124 ವರ್ಷದ ಮಿಂತಾ ದೇವಿ ಮೊದಲ ಬಾರಿಯ ಮತದಾರಳು ಎಂದು ಸೇರ್ಪಡೆ ಮಾಡಿರುವುದನ್ನು ಅಸ್ತ್ರವಾಗಿಸಿ ಕಾಂಗ್ರೆಸ್ ನಾಯಕರು ಆ ಮಹಿಳೆಯ ಫೋಟೋ ಇರುವ ಟಿಶರ್ಟ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಆದರೆ ಇದಕ್ಕೆ ಸ್ವತಃ ಮಿಂತಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು ತಪ್ಪಾಗಿದೆ ಎಂದು ಎರಡು ದಿನದ ಹಿಂದಷ್ಟೇ ತಿಳಿಯಿತು. ಈ ಬಗ್ಗೆ ಇಷ್ಟೊಂದು ಕಾಳಜಿ ಮಾಡಲು ರಾಹುಲ್ ಗಾಂಧಿ, ಪ್ರಿಯಾಂಕ ಯಾರು? ನನ್ನ ವಯಸ್ಸಿನ ಬಗ್ಗೆ ಅವರೇಕೆ ಚಿಂತಿತರಾಗಿದ್ದಾರೆ? ಅಷ್ಟಕ್ಕೂ ನನ್ನ ಹೆಸರಿನ ಟಿಶರ್ಟ್ ಧರಿಸಿರುವುದು ಯಾಕೆ? ಎಂದಿರುವ ಅವರು ನನ್ನ ವಯಸ್ಸು 124 ಆಗಿದ್ದರೆ ನನಗೆ ವೃದ್ಧಾಪ್ಯ ವೇತನ ಬರಬೇಕಿತ್ತು ಎಂದಿದ್ದಾರೆ.