ಬೆಂಗಳೂರು: ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣರನ್ನು ದಿಡೀರ್ ಸಂಪುಟದಿಂದ ಕಿತ್ತು ಹಾಕಲಾಗಿದೆ. ಅಷ್ಟಕ್ಕೂ ಕೆಎನ್ ರಾಜಣ್ಣ ರಾಜೀನಾಮೆಗೆ ನಿಜ ಕಾರಣ ಯಾರು, ಯಾಕೆ ಇಲ್ಲಿದೆ ವಿವರ.
ಕೆಎನ್ ರಾಜಣ್ಣ ಮೊದಲಿನಿಂದಲೂ ನೇರ ನುಡಿಯಿಂದ ನಿಷ್ಠುರಕ್ಕೊಳಗಾದವರು. ರಾಜ್ಯ ಕಾಂಗ್ರೆಸ್ ನಾಯಕರಿಗೆ ವಿವಾದಾತ್ಮಕ ಹೇಳಿಕೆಗಳಿಂದ ಮಗ್ಗಲ ಮುಳ್ಳಾಗಿದ್ದರು. ಹೀಗಾಗಿ ಈಗ ಕೆಎನ್ ರಾಜಣ್ಣ ತಲೆದಂಡದಿಂದ ಕೆಲವರಿಗೆ ಒಳಗೊಳಗೇ ಖುಷಿಯಾದರೆ ಮತ್ತೆ ಕೆಲವರಿಗೆ ನಡುಕ ಶುರುವಾಗಿದೆ.
ರಾಜ್ಯ ರಾಜಕಾರಣದ ಬಗ್ಗೆ ಕೆಎನ್ ರಾಜಣ್ಣ ಹೇಳಿಕೆ ನೀಡಿದಾಗಲೆಲ್ಲಾ ಕೇವಲ ಎಚ್ಚರಿಕೆಯಿಂದಷ್ಟೇ ಹೈಕಮಾಂಡ್ ಸುಮ್ಮನಾಗಿತ್ತು. ಆದರೆ ಯಾವಾಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತಗಳ್ಳತನ ಪ್ರತಿಭಟನೆ ಬಗ್ಗೆಯೇ ಟೀಕಿಸಿದರೋ ಅದು ಹೈಕಮಾಂಡ್ ಕೆರಳಿಸಿತ್ತು.
ಕೆಎನ್ ರಾಜಣ್ಣ ಮಾತನಾಡಿದ್ದ ವಿಡಿಯೋ, ಹೇಳಿಕೆಗಳು ನೇರವಾಗಿ ರಾಹುಲ್ ಗಾಂಧಿ ಕಚೇರಿ ತಲುಪಿದ್ದವು. ತಮ್ಮ ಬಗ್ಗೆಯೇ ಟೀಕೆ ಮಾಡಿದ ಕೆಎನ್ ರಾಜಣ್ಣ ಹೇಳಿಕೆಯನ್ನು ರಾಹುಲ್ ಇಂಗ್ಲಿಷ್ ಗೆ ಭಾಷಾಂತರಿಸಿಕೊಂಡು ಏನು ಹೇಳಿದ್ದಾರೆ ಎಂದು ತಿಳಿದುಕೊಂಡಿದ್ದರು. ಕೆಎನ್ ರಾಜಣ್ಣ ಹೇಳಿದ್ದು ಕೇಳಿದ ಮೇಲೆ ರಾಹುಲ್ ಗಾಂಧಿ ವಿಪರೀತ ಸಿಟ್ಟಾಗಿದ್ದರು.
ತಕ್ಷಣವೇ ರಾಜಣ್ಣನನ್ನು ಪಕ್ಷದಿಂದಲೇ ವಜಾಗೊಳಿಸಲು ಸೂಚಿಸಿದ್ದರು. ಆದರೆ ಈ ಸಮಯದಲ್ಲಿ ಪಕ್ಷದಿಂದ ಕಿತ್ತು ಹಾಕುವುದು ಒಳ್ಳೆಯದಲ್ಲ ಎಂದು ಹಿರಿಯರು ಸಲಹೆ ನೀಡಿದ ಮೇಲೆ ಸಚಿವ ಸಂಪುಟದಿಂದ ಕಿತ್ತು ಹಾಕಲು ಹೇಳಿದರು. ರಾಹುಲ್ ಸೂಚನೆಯಂತೆ ನಿನ್ನೆಯೇ ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ಒಂದು ವೇಳೆ ರಾಜೀನಾಮೆಗೆ ನಿರಾಕರಿಸಿದರೆ ಪಕ್ಷದಿಂದಲೇ ಕಿತ್ತು ಹಾಕಲು ಆರ್ಡರ್ ಮಾಡಿದ್ದರು. ಅದರಂತೆ ರಾಜಣ್ಣ ರಾಜೀನಾಮೆಗೆ ಸೂಚಿಸಲಾಯಿತು.