ಬೆಂಗಳೂರು: ಪಕ್ಷದ ನಾಯಕರ ವಿರುದ್ಧವೇ ಮಾತನಾಡಿದ ಸಚಿವ ಕೆಎನ್ ರಾಜಣ್ಣರನ್ನು ದಿಡೀರ್ ಆಗಿ ಸಚಿವ ಸ್ಥಾನದಿಂದ ಕಿತ್ತು ಹಾಕಲಾಗಿದೆ. ರಾಹುಲ್ ಗಾಂಧಿ ಮಾಡಿದ ಕೆಲಸಕ್ಕೆ ಈಗ ರಾಜ್ಯ ಕಾಂಗ್ರೆಸ್ ನ ಈ ಎಲ್ಲಾ ನಾಯಕರಿಗೆ ಈಗ ನಡುಕ ಶುರುವಾಗಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯರದ್ದು ಒಂದು ಬಣವಾದರೆ ಇನ್ನೊಂದು ಬಣ ಡಿಕೆ ಶಿವಕುಮಾರ್ ಪರವಾಗಿದೆ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಆದರೆ ಈ ಎರಡೂ ಬಣಗಳಿಗೆ ಸೇರಿದ ನಾಯಕರು ಸದಾ ನಾಯಕತ್ವ ಬದಲಾವಣೆ ಬಗ್ಗೆ ಒಂದಿಲ್ಲೊಂದು ಹೇಳಿಕೆ ನೀಡುತ್ತಲೇ ಇದ್ದರು. ಇವರಲ್ಲಿ ಕೆಎನ್ ರಾಜಣ್ಣ ಕೂಡಾ ಒಬ್ಬರಾಗಿದ್ದರು.
ಕಾಂಗ್ರೆಸ್ ನ ಮತಗಳ್ಳತನ ಹೋರಾಟದ ಬಗ್ಗೆಯೇ ಕಿಡಿ ಕಾರಿದ್ದ ರಾಜಣ್ಣರನ್ನು ಸ್ವತಃ ರಾಹುಲ್ ಗಾಂಧಿ ಸೂಚನೆಯಂತೆ ಸಂಪುಟದಿಂದ ಕಿತ್ತು ಹಾಕಲಾಗಿದೆ. ಈ ಮೂಲಕ ಹೈಕಮಾಂಡ್ ಪಕ್ಷದ ಶಿಸ್ತು ಉಲ್ಲಂಘಿಸಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದೆ.
ಹೈಕಮಾಂಡ್ ನಿಂದಲೇ ಈಗಾಗಲೇ ಹಲವು ಬಾರಿ ಎಚ್ಚರಿಕೆ ಬಂದರೂ ಕ್ಯಾರೇ ಎನ್ನದೇ ನಾಯಕತ್ವ ವಿಚಾರವಾಗಿ ಸಾರ್ವಜನಿಕವಾಗಿ ಹೇಳಿಕೆ ನೀಡುವ ಅನೇಕರಿದ್ದಾರೆ. ಅವರಿಗೆಲ್ಲಾ ಈಗ ನಡುಕ ಶುರುವಾಗಿದೆ. ಮುಖ್ಯವಾಗಿ ಇಕ್ಬಾಲ್ ಹುಸೇನ್, ರಾಜು ಕಾಗೆ, ಎಚ್ ಸಿ ಬಾಲಕೃಷ್ಣ, ಬಿಆರ್ ಪಾಟೀಲ್, ಬಸವರಾಜ ರಾಯರೆಡ್ಡಿ ಮೊದಲಾದವರು ಸದಾ ನಾಲಿಗೆ ಹರಿಬಿಡುತ್ತಲೇ ಇರುತ್ತಾರೆ. ಆದರೆ ರಾಹುಲ್ ಗಾಂಧಿ ನೀಡಿದ ಏಟಿಗೆ ಈ ನಾಯಕರಿಗೂ ನಡುಕ ಶುರುವಾಗಿದೆ.