ನವದೆಹಲಿ: ತವರಿನಲ್ಲಿ ಸೈಲೆಂಟ್, ವಿದೇಶಕ್ಕೆ ಹೋದಾಗ ಸ್ನೇಹಿತ ಅದಾನಿಗಾಗಿ ಲಾಬಿ ನಡೆಸುವುದೇ ಮೋದಿ ಕೆಲಸ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದ ಬಗ್ಗೆ ರಾಹುಲ್ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ. ತವರಿನಲ್ಲಿ ಅದಾನಿ ಬಗ್ಗೆ ಏನೇ ಕೇಳಿದ್ರೂ ಮೋದಿ ಸೈಲೆಂಟ್ ಆಗಿರ್ತಾರೆ. ವಿದೇಶಕ್ಕೆ ಹೋದಾಗ ಅಲ್ಲಿ ಅಧ್ಯಕ್ಷರ ಜೊತೆ ತಮ್ಮ ಸ್ನೇಹಿತನನ್ನು ಭ್ರಷ್ಟಾಚಾರ ಆರೋಪಗಳಿಂದ ರಕ್ಷಿಸಲು ಗುರಾಣಿ ಹಿಡಿದುಕೊಂಡು ನಿಲ್ಲುತ್ತಾರೆ ಎಂದು ರಾಹುಲ್ ಟೀಕೆ ಮಾಡಿದ್ದಾರೆ.
ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಕ್ರಮ ಆರೋಪಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ರಾಹುಲ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಗೌತಮ್ ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ರಾಹುಲ್ ಮತ್ತು ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ.
ಮೋದಿ ಪ್ರಕಾರ ತಮ್ಮ ಸ್ನೇಹಿತನ ಪಾಕೆಟ್ ತುಂಬಿಸುವುದು ರಾಷ್ಟ್ರ ಕಟ್ಟುವ ಕೆಲಸ. ಭ್ರಷ್ಟಾಚಾರ ದೇಶದ ಸಂಪತ್ತನ್ನು ಲೂಟಿ ಹೊಡೆಯುವಾಗ ಮೋದಿಗೆ ವೈಯಕ್ತಿಕ ವಿಚಾರ ದೊಡ್ಡದಾಗುತ್ತದೆ ಎಂದು ರಾಹುಲ್ ಟೀಕಿಸಿದ್ದಾರೆ.