ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತಎಣಿಗೆ ಬಿರುಸಿನಿಂದ ಸಾಗಿದ್ದು, ಬಿಜೆಪಿ-ಎಎಪಿ ನಡುವಿನ ಪೈಪೋಟಿ ಚುನಾವಣಾ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿಸುತ್ತಲೇ ಇದೆ. ಅದರೆ, ಉಚಿತ ಗ್ಯಾರಂಟಿ ಘೋಷಿಸಿ ಸೀಮಿತ ಹೋರಾಟ ನಡೆಸಿದ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಿದ್ದು, 11 ಗಂಟೆ ವೇಳೆಗೆ ಬಿಜೆಪಿ 44 ಸ್ಥಾನಗಳೊಂದಿಗೆ ಭರ್ಜರಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಆಪ್ 28 ಸ್ಥಾನಗಳನ್ನು ಪಡೆದು ಹಿನ್ನಡೆಯಲ್ಲಿದ್ದರೆ. ಕಾಂಗ್ರೆಸ್ ಇನ್ನೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ತಂದಿದೆ.
ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.
ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಕೇಜ್ರಿವಾಲ್ 2 ರಿಂದ 5 ಸುತ್ತುಗಳ ವರೆಗೂ ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ಬಿಜೆಪಿ ಅಭ್ಯರ್ಥಿ ಪರ್ವೇಶ್ ವಿರುದ್ಧ 6ನೇ ಸುತ್ತಿನಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದಾರೆ.
2013ರ ಚುನಾವಣೆಯಲ್ಲಿ ಬಿಜೆಪಿ 31, ಆಪ್ 28, ಕಾಂಗ್ರೆಸ್ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.
ಕಳೆದ 27 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ ಘೋಷಿಸಿದೆ.