ನವದೆಹಲಿ: ಇಂದು ಲೋಕಸಭೆಯಲ್ಲಿ ವಂದೇಮಾತರಂ ಗೀತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಈ ಹಿಂದೆ ಮುಸ್ಲಿಮರ ತುಷ್ಠೀಕರಣಕ್ಕಾಗಿ ವಂದೇ ಮಾತರಂ ಹಾಡನ್ನು ತುಂಡು ತುಂಡು ಮಾಡಿತು ಎಂದು ಗುಡುಗಿದ್ದಾರೆ.
ರಾಷ್ಟ್ರೀಯ ಹಾಡು ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಈ ಹಿಂದೆ ಜಿನ್ನಾ ವಂದೇ ಮಾತರಂ ಹಾಡು ವಿರೋಧಿಸಿ ಪ್ರತಿಭಟಿಸಿದಾಗ ನೆಹರೂ ಅದನ್ನು ಬೆಂಬಲಿಸಿದ್ದರು.
ವಂದೇ ಮಾತರಂ ಹಾಡಿನ ವಿರುದ್ಧ ಮುಸ್ಲಿಂ ಲೀಗ್ ನೆಹರೂ ಅವರಿಗೆ ಪತ್ರ ಬರೆದು ತನ್ನ ವಿರೋಧ ವ್ಯಕ್ತಪಡಿಸಿತ್ತು. ಮೊಹಮ್ಮದ್ ಅಲಿ ಜಿನ್ನಾ ವಂದೇ ಮಾತರಂ ವಿರುದ್ಧ ಘೋಷಣೆ ಕೂಗಿದರು. ಇದನ್ನು ನೆಹರೂ ಪ್ರತಿಭಟಿಸಲಿಲ್ಲ. ಬದಲಾಗಿ ಇದಾದ ಕೇವಲ ಐದು ದಿನಗಳ ಬಳಿಕ ವಂದೇ ಮಾತರಂ ಹಾಡು ಪುನರ್ ಪರಿಶೀಲಿಸುವ ಕೆಲಸ ಮಾಡಿದರು.
ಬಳಿಕ ನೆಹರೂ ಅವರು ಸುಭಾಷ್ ಚಂದ್ರ ಭೋಸ್ ಅವರಿಗೆ ಪತ್ರ ಬರೆದು, ವಂದೇ ಮಾತರಂ ಹಾಡಿನ ಹಿನ್ನಲೆಯನ್ನು ನಾನು ತಿಳಿದುಕೊಂಡಿದ್ದೇನೆ. ಇದರಲ್ಲಿರುವ ಸಾಲುಗಳು ಮುಸ್ಲಿಮರಿಗೆ ಕಿರಿ ಕಿರಿಯಾಗಬಹುದು ಎಂದಿದ್ದರು. ಬಳಿಕ ದೇಶದ ದೌರ್ಭಾಗ್ಯ ಎನ್ನುವಂತೆ ಕಾಂಗ್ರೆಸ್ ವಂದೇ ಮಾತರಂ ಹಾಡಿಗೆ ಕತ್ತರಿ ಹಾಕಿತು ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.