ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಳು 48 ಗಂಟೆಗಳ ಸಮಯವನ್ನು ಭಾರತ ನೀಡಿದೆ.
ಇದೀಗ ಈ ನಿಯಮ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿದ ಸೀಮಾ ಹೈದರ್‌ಗೂ ಅನ್ವಯವಾಗುತ್ತಾ ಎಂಬ ಚರ್ಚೆ ಶುರುವಾಗಿದೆ.
ತಾನೂ ಪ್ರೀತಿಸಿದ ಭಾರತದ ಯುವಕನಿಗಾಗಿ ತಮ್ಮ ಮೊದಲ ಪತಿಯನ್ನು ಬಿಟ್ಟು ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದ ಸೀಮಾ ಹೈದರ್ ಈಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸೀಮಾ ಹೈದರ್ ಅವರ ಪೌರತ್ವ ಅರ್ಜಿಯನ್ನು ಅನುಮೋದಿಸಲಾಗಿಲ್ಲ ಮತ್ತು ಭಾರತದಲ್ಲಿ ಅವರ ಕಾನೂನು ಸ್ಥಾನಮಾನವು ವಿವಾದಾಸ್ಪದವಾಗಿದೆ.
ಇದಿಗ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರದ ನಿಯಮದಂತೆ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಕೂಡ ಭಾರತವನ್ನು ತೊರೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆಯೇ ಎಂಬ ಚರ್ಚೆ ಜೋರಾಗಿ ಸುದ್ದಿಯಾಗುತ್ತಿದೆ.
ಸೀಮಾ ಹೈದರ್ ಯಾರು?
ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆಯಾಗಿದ್ದು, ಎರಡು ವರ್ಷಗಳ ಹಿಂದೆ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾಳೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನಿಂದ ಬಂದಿರುವ 32 ವರ್ಷ ವಯಸ್ಸಿನ ಈಕೆ ತನ್ನ ಮಕ್ಕಳನ್ನು ಕರೆದುಕೊಂಡು ಮೇ 2023 ರಲ್ಲಿ ಕರಾಚಿಯಲ್ಲಿರುವ ಮನೆಯಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದರು.
2019ರಲ್ಲಿ ಆನ್‌ಲೈನ್ ಮೂಲಕ ಭಾರತದ ಸಚಿನ್ ಜತೆ ಸಂಪರ್ಕವಾಗಿ ನಂತರ ಇವರಿಬ್ಬರ ಮಧ್ಯೆ ಪ್ರೇಮ ಬೆಳೆಯಿತು. ಅಕ್ರಮವಾಗಿ ಭಾರತಕ್ಕೆ ತನ್ನ ನಾಲ್ವರು ಮಕ್ಕಳೊಂದಿಗೆ ಬಂದ ಸೀಮಾ ನಂತರ ಸಚಿನ್ ಜತೆ ಎರಡನೇ ಮದುವೆಯಾದಳು. ಸೀಮಾ ಹೈದರ್ ತನ್ನ ಪಾಕಿಸ್ತಾನಿ ಪತಿ ಗುಲಾಮ್ ಹೈದರ್‌ನಿಂದ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.
ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಜುಲೈ 2023 ರಲ್ಲಿ ಬಂಧಿಸಲಾಯಿತು. ಸೀಮಾ ಹೈದರ್ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಹಾಗೂ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಚಿನ್‌ನನ್ನು ಮದುವೆಯಾದ ನಂತರ ಸೀಮಾ ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಳು.
ಈ ವರ್ಷದ ಮಾರ್ಚ್‌ನಲ್ಲಿ ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.