ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತವನ್ನು ನೀಡುವ ಮೂಲಕ ಪ್ರತ್ಯುತ್ತರವನ್ನು ನೀಡಲು ಶುರು ಮಾಡಿದೆ.
ಅಟ್ಟಾರಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಅನ್ನು ತಕ್ಷಣವೇ ಮುಚ್ಚುವುದಾಗಿ ಘೋಷಿಸಿತು. ಭದ್ರತಾ ಕ್ಯಾಬಿನೆಟ್ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಬುಧವಾರ ಪ್ರಕಟಿಸಿದರು.
ಅಮೃತಸರದಿಂದ ಕೇವಲ 28 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಟ್ಟಾರಿ, ಭಾರತದ ಮೊದಲ ಭೂ ಬಂದರು ಮತ್ತು ಪಾಕಿಸ್ತಾನದೊಂದಿಗೆ ವ್ಯಾಪಾರಕ್ಕಾಗಿ ಅನುಮತಿಸಲಾದ ಏಕೈಕ ಭೂ ಮಾರ್ಗವಾಗಿದೆ.
120 ಎಕರೆಗಳಷ್ಟು ಹರಡಿದೆ ಮತ್ತು ರಾಷ್ಟ್ರೀಯ ಹೆದ್ದಾರಿ-I ಗೆ ನೇರವಾಗಿ ಸಂಪರ್ಕ ಹೊಂದಿದೆ, ಗಡಿಯಾಚೆಗಿನ ವ್ಯಾಪಾರದಲ್ಲಿ, ವಿಶೇಷವಾಗಿ ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುವಲ್ಲಿ ಚೆಕ್ ಪೋಸ್ಟ್ ನಿರ್ಣಾಯಕ ಪಾತ್ರವನ್ನು ವಹಿಸಿದೆ.
ಅಟ್ಟಾರಿ-ವಾಘಾ ಕಾರಿಡಾರ್ ವರ್ಷಗಳಲ್ಲಿ ವ್ಯಾಪಾರ ಮತ್ತು ಪ್ರಯಾಣಿಕರ ಚಲನೆಯಲ್ಲಿ ಏರಿಳಿತದ ಅಂಕಿಅಂಶಗಳಿಗೆ ಸಾಕ್ಷಿಯಾಗಿದೆ. 2023-24 ರಲ್ಲಿ, ಲ್ಯಾಂಡ್ ಪೋರ್ಟ್ 6,871 ಸರಕು ಸಾಗಣೆ ಮತ್ತು 71,563 ಪ್ರಯಾಣಿಕರ ಕ್ರಾಸಿಂಗ್‌ಗಳೊಂದಿಗೆ 3,886.53 ಕೋಟಿ ಮೌಲ್ಯದ ವ್ಯಾಪಾರ ಇಲ್ಲಿ ನಡೆದಿದೆ.
ಅಟ್ಟಾರಿ ಲ್ಯಾಂಡ್ ಬಂದರು ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರ್ಣಾಯಕ ವ್ಯಾಪಾರ ಮಾರ್ಗವಾಗಿ ದೀರ್ಘಕಾಲ ಸೇವೆ ಸಲ್ಲಿಸಿದೆ. ವಿವಿಧ ಸರಕುಗಳನ್ನು ನಿರ್ವಹಿಸುತ್ತದೆ. ಸೋಯಾಬೀನ್, ಚಿಕನ್ ಫೀಡ್, ತರಕಾರಿಗಳು, ಕೆಂಪು ಮೆಣಸಿನಕಾಯಿಗಳು, ಪ್ಲಾಸ್ಟಿಕ್ ಡಾನಾ ಮತ್ತು ಪ್ಲಾಸ್ಟಿಕ್ ನೂಲು ಈ ಮಾರ್ಗದ ಮೂಲಕ ಪ್ರಮುಖ ಭಾರತದಿಂದ ರಫ್ತು ಆಗುತ್ತಿತ್ತು.
ಇನ್ನೂ ಭಾರತಕ್ಕೆ ಪಾಕಿಸ್ತಾನದಿಂದ ಒಣ ಹಣ್ಣುಗಳು, ಒಣ ಖರ್ಜೂರಗಳು, ಜಿಪ್ಸಮ್, ಸಿಮೆಂಟ್, ಗಾಜು, ಕಲ್ಲು ಉಪ್ಪು ಮತ್ತು ವಿವಿಧ ಗಿಡಮೂಲಿಕೆಗಳನ್ನು ಒಳಗೊಂಡಿವೆ.
ವಾಘಾ- ಅಟ್ಟಾರಿ ಬಾರ್ಡರ್ ಬಂದ್ ಆಗುವ ಮೂಲಕ ಈ ಸರಕುಗಳ ಚಲನೆಯಲ್ಲಿ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ಈ ಗಡಿಯಾಚೆಗಿನ ವಿನಿಮಯವನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳು ಮತ್ತು ತಯಾರಕರ ಮೇಲೆ ಪರಿಣಾಮ ಬೀರುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಈಗಾಗಲೇ ದುರ್ಬಲವಾದ ಮತ್ತು ಕುಂಟುತ್ತಿರುವ ವ್ಯಾಪಾರ ಸಂಬಂಧಕ್ಕೆ ಮತ್ತೊಂದು ಹೊಡೆತವನ್ನು ನೀಡಲು ಸಿದ್ಧವಾಗಿವೆ.