ಪಾಟ್ನಾ: ಬಿಹಾರ ಸಿಎಂ ಆಗಿ 10 ನೇ ಬಾರಿಗೆ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನೆರವೇರಿದೆ.
ಮೊನ್ನೆಯಷ್ಟೇ ಬಿಹಾರ ಚುನಾವಣೆ ಫಲಿತಾಂಶದಲ್ಲಿ ಜೆಡಿಯು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಿದೆ. ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು, ನಿತೀಶ್ ಜೊತೆಗೆ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹೊಸ ಸರ್ಕಾರದಲ್ಲಿ ಬಿಜೆಪಿಗೆ 14 ಸಚಿವ ಸ್ಥಾನ ಸಿಕ್ಕಿದೆ. ಜೆಡಿಯು 7 ಸಚಿವ ಸ್ಥಾನವನ್ನು ಪಡೆದಿದೆ. ಇದಲ್ಲದೆ, ಹಿಂದೂಸ್ಥಾನಿ ಆವಾಝ್ ಮೋರ್ಚಾ, ಆರ್ ಎಲ್ಎಂ ಪಕ್ಷಗಳೂ ತಲಾ 1 ಸಚಿವ ಸ್ಥಾನವನ್ನು ಪಡೆದಿವೆ.
ಇನ್ನು, ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭಕ್ಕೆ ಪ್ರಧಾನಿ ಮೋದಿ ಕೂಡಾ ಆಗಮಿಸಿದ್ದರು. ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೇ ನಿತೀಶ್ ಕುಮಾರ್ ಅವರನ್ನು ಮೋದಿ ಅಭಿನಂದಿಸಿದ್ದಾರೆ.