ಪುಟ್ಟಪರ್ತಿ: ಇಂದು ಸಾಯಿಬಾಬ ಅವರ ಜನ್ಮ ಜಯಂತಿ ನಿಮಿತ್ತ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿದ್ದ ಪ್ರಧಾನಿ ಮೋದಿ ಕಾಲಿಗೆ ನಟಿ ಐಶ್ವರ್ಯಾ ರೈ ನಮಸ್ಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಸಾಯಿಬಾಬ ಜನ್ಮ ಜಯಂತಿ ನಿಮಿತ್ತ ಪುಟ್ಟಪರ್ತಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಐಶ್ವರ್ಯಾ ರೈ ಸೇರಿದಂತೆ ಘಟಾನುಘಟಿಗಳು ವೇದಿಕೆಯಲ್ಲಿದ್ದರು.
ಈ ವೇಳೆ ನಟಿ ಐಶ್ವರ್ಯಾ ರೈ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಾಯಿಬಾಬರ ಆದರ್ಶಗಳನ್ನು ಸ್ಮರಿಸಿದ ಐಶ್ವರ್ಯಾ ಒಂದೇ ಜಾತಿ ಇರುವುದು, ಅದು ಮಾನವೀಯತೆ, ಒಂದೇ ಧರ್ಮ ಅದು ಪ್ರೀತಿ, ಒಂದೇ ಭಾಷೆ ಅದು ಹೃದಯದ ಭಾಷೆ, ದೇವರೂ ಒಬ್ಬನೇ ಎಂದು ಭಾಷಣ ಮಾಡಿದ್ದಾರೆ.
ತಮ್ಮ ಭಾಷಣ ಮುಗಿಸಿ ಐಶ್ವರ್ಯಾ ವೇದಿಕೆಯಲ್ಲಿದ್ದ ತಮ್ಮ ಆಸನದಲ್ಲಿ ಕೂರುವ ಮೊದಲು ಪಕ್ಕದಲ್ಲೇ ಕುಳಿತಿದ್ದ ಪ್ರಧಾನಿ ಮೋದಿ ಬಳಿ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.
ಬಿಜೆಪಿ ಬೆಂಬಲಿಗರು ಈ ವಿಚಾರವಾಗಿ ಐಶ್ವರ್ಯಾರನ್ನು ಹೊಗಳಿದ್ದಾರೆ. ಹಿರಿಯರಿಗೆ ಗೌರವ ಕೊಡುವುದು ಹೇಗೆ ಎಂದು ಐಶ್ವರ್ಯಾರನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಇನ್ನು, ಬಿಜೆಪಿ ಮತ್ತು ಮೋದಿ ವಿರೋಧಿಗಳು ಐಶ್ವರ್ಯಾ ಹೀಗೆ ಮಾಡುವ ಅಗತ್ಯವಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.