ನವದೆಹಲಿ: ಇಂದು ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಇದಕ್ಕೆ ಮೊದಲು ತಮ್ಮ ರಾಜಕೀಯ ಗುರು, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಇಂದು 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿಗಳು ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊದಲು ಮೋದಿ ಇಂದು ಬೆಳಿಗ್ಗೆ ವಾಜಪೇಯಿ ಸಮಾಧಿ, ಮಹಾತ್ಮಾ ಗಾಂಧೀಜಿ ಸಮಾಧಿ, ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಈ ಬಾರಿ ಬಿಜೆಪಿಗೆ ಬಹುಮತ ಬಂದಿಲ್ಲ. ಆದರೂ ಮೈತ್ರಿ ಪಕ್ಷಗಳೊಂದಿಗೆ ಸೇರಿಕೊಂಡು ಎನ್ ಡಿಎ ಸರ್ಕಾರ ರಚಿಸಲಿದೆ. ಟಿಡಿಪಿ, ಜೆಡಿಯು ಸೇರಿದಂತೆ ಹಲವು ಪಕ್ಷಗಳು ಈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಇಂದು ಸುಮಾರು 30 ಮಂದಿ ಮೋದಿ ಹೊಸ ಕ್ಯಾಬಿನೆಟ್ ಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಇನ್ನೊಂದೆಡೆ ಇಂದಿನ ಕಾರ್ಯಕ್ರಮಕ್ಕೆ ದೆಹಲಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ, ಶ್ರೀಲಂಕಾ, ನೇಪಾಳ, ಭೂತಾನ್, ಮಾಲ್ಡೀವ್ಸ್ ಸೇರಿದಂತೆ ವಿದೇಶೀ ಗಣ್ಯರೂ ಆಗಮಿಸಲಿದ್ದಾರೆ. ಕಾಂಗ್ರೆಸ್ಸೇತರ ಪ್ರಧಾನಿಯೊಬ್ಬರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲಾಗಿದೆ.