Publish Date: Sun, 09 Jun 2024 (09:26 IST)
Updated Date: Sun, 09 Jun 2024 (09:30 IST)
ನವದೆಹಲಿ: ಸತತ ಮೂರನೇ ಬಾರಿಗೆ ಇಂದು ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೆಹಲಿಯಲ್ಲಿ ಸಿದ್ಧತೆಗಳು ನಡೆದಿವೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಕಳೆದ ಎರಡು ಬಾರಿ ಬಿಜೆಪಿಯೇ ಬಹುಮತ ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೇರುತ್ತಿದೆ. ಆದರೆ ಮೂರನೇ ಬಾರಿಯೂ ಮೋದಿಯೇ ಪ್ರಧಾನಿಯಾಗುತ್ತಿದ್ದಾರೆ.
ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 7 ವಿದೇಶೀ ನಾಯಕರೂ ಆಗಮಿಸಲಿದ್ದಾರೆ. ಜೊತೆಗೆ ಎನ್ ಡಿಎ ಒಕ್ಕೂಟದ ಎಲ್ಲಾ ಸಂಸದರೂ ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿಸಂಜೆ 7.15 ಕ್ಕೆ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೋದಿ ಜೊತೆಗೆ ಕೆಲವು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಲಿಸ್ಟ್ ಇದುವರೆಗೆ ಗೌಪ್ಯವಾಗಿರಿಸಲಾಗಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ವಾಹಿನಿ ಮತ್ತು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಲೈವ್ ಆಗಿ ವೀಕ್ಷಿಸಬಹುದಾಗಿದೆ.