ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಎಂದಿದ್ದರು. ಆದರೆ ಅವರ ಭವಿಷ್ಯ ಸುಳ್ಳಾಗಿತ್ತು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳ ಗುರಿ ಹಾಕಿಕೊಂಡಿತ್ತು. ಆದರೆ ಬಿಜೆಪಿಗೆ ಏಕಾಂಗಿಯಾಗಿ ಸರ್ಕಾರ ರಚಿಸುವಷ್ಟು ಬಹುಮತ ಬಂದಿರಲಿಲ್ಲ. ಇದೀಗ ಎನ್ ಡಿಎ ಮಿತ್ರ ಪಕ್ಷಗಳ ಸಹಾಯದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ. ನಾಳೆ ಪ್ರಧಾನಿಯಾಗಿ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಆದರೆ ಫಲಿತಾಂಶಕ್ಕೆ ಮುನ್ನ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಬಿಜೆಪಿ ದಾಖಲೆಯ ಬಹುಮತ ಸಾಧಿಸಲಿದೆ ಎಂದಿದ್ದರು. ಅದು ಸುಳ್ಳಾದ ಬೆನ್ನಲ್ಲೇ ಅವರು ಈಗ ಹೊಸ ಶಪಥ ಮಾಡಿದ್ದಾರೆ. ಇನ್ನು ಮುಂದೆ ತಾನು ದೇಶದಲ್ಲಿ ನಡೆಯುವ ಯಾವುದೇ ಚುನಾವಣೆ ಬಗ್ಗೆ ಭವಿಷ್ಯ ಹೇಳಲ್ಲ ಎಂದಿದ್ದಾರೆ.
ನಾನು ಮತ್ತು ನನ್ನಂತಹ ಸಮೀಕ್ಷಕರು ಚುನಾವಣಾ ಅಂಕಿ ಅಂಶವನ್ನು ತಪ್ಪಾಗಿ ನೀಡಿದ್ದೇವೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ದೇಶದಲ್ಲಿ ನಡೆಯುವ ಚುನಾವಣೆಗಳ ಬಗ್ಗೆ ಅಂಕಿ ಅಂಶಗಳನ್ನ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.